ತನ್ನ ಅಚ್ಚುಮೆಚ್ಚಿನ ಕಾರು ಮಾರಿ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಕಿಟ್ ವಿತರಿಸಿದ ಶಹನವಾಝ್ ಶೇಖ್
ಮುಂಬೈ: ಮುಂಬೈಯ ಮಲಾಡ್ ನಿವಾಸಿ, 31 ವರ್ಷದ ಶಹನವಾಝ್ ಶೇಖ್ ಅವರಿಗೆ ತಮ್ಮ ಫೋರ್ಡ್ ಎಂಡೆವರ್ ಕಾರು ಎಂದರೆ ಅಚ್ಚುಮೆಚ್ಚು. 2011ರಲ್ಲಿ ಅವರು ಈ ಕಾರು ಖರೀದಿಸಿದ್ದ ಸಂದರ್ಭ ಅದಕ್ಕೆ ಪ್ರೀಮಿಯಂ ನಂಬರ್ ಪ್ಲೇಟ್-007 ಹಾಗೂ ಕಸ್ಟಮೈಸ್ಡ್ ಮ್ಯೂಸಿಕ್ ಸಿಸ್ಟಂ ಪಡೆಯಲು ಸ್ವಲ್ಪ ಹೆಚ್ಚೇ ಖರ್ಚು ಮಾಡಿದ್ದರು. ಲಾಕ್ ಡೌನ್ ಸಂದರ್ಭ ಅವರು ತಮ್ಮ ಈ ಅಚ್ಚುಮೆಚ್ಚಿನ ಕಾರನ್ನು ತಾತ್ಕಾಲಿಕವಾಗಿ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದರು. ಆದರೆ ಮೇ 28ರಂದು ಅವರ ಉದ್ಯಮ ಪಾಲುದಾರನ ಸೋದರಿ, ಆರು ತಿಂಗಳ ಗರ್ಭಿಣಿಯಾಗಿದ್ದ ಹಾಗೂ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಮಹಿಳೆಗೆ ಐದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಿ ಆಕೆ ಇನ್ನೊಂದು ಆಸ್ಪತ್ರೆಯ ಹೊರಗೆ ಆಟೋರಿಕ್ಷಾದಲ್ಲಿಯೇ ಮೃತಪಟ್ಟ ಘಟನೆ ನಂತರ ಶಹನವಾಝ್ ಅವರ ಯೋಚನಾ ದಿಕ್ಕೇ ಬದಲಾಗಿತ್ತು.
ಆಕೆಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ದೊರಕುತ್ತಿದ್ದರೆ ಆಕೆಯ ಜೀವವುಳಿಸಬಹುದಾಗಿತ್ತು ಎಂದು ತಿಳಿದಾಗ ಶಹನವಾಝ್ ತಮ್ಮ ಅಚ್ಚುಮೆಚ್ಚಿನ ಎಸ್‍ಯುವಿಯನ್ನು ಮಾರಾಟ ಮಾಡಿಬಿಟ್ಟರು. ಅಷ್ಟೇ ಅಲ್ಲದೆ ಅದರಿಂದ ದೊರೆತ ಹಣದಿಂದ ಆಮ್ಲಜನಕ ಸಿಲಿಂಡರ್ ಖರೀದಿಸಿ ಅವುಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾರಂಭಿಸಿದರು ಎಂದು mumbaimirror.indiatimes.com ವರದಿ ಮಾಡಿದೆ.
ಅವರು ತಮ್ಮ ಈ ಉದಾತ್ತ ಕೈಂಕರ್ಯವನ್ನು ಜೂನ್ 5ರಂದು ಆರಂಭಿಸಿದ್ದು ಇಲ್ಲಿಯ ತನಕ ಕೋವಿಡ್-19 ರೋಗಿಗಳಿರುವ 250ಕ್ಕೂ ಅಧಿಕ ಕುಟುಂಬಗಳಿಗೆ ಉಚಿತವಾಗಿ ಆಮ್ಲಜನಕ ಕಿಟ್ ಒದಗಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಹನವಾಝ್ ಮತ್ತವರ ಸ್ನೇಹಿತರು ತಮ್ಮ ಫೋನ್ ನಂಬರ್ ನೀಡಿ ಅಗತ್ಯವಿರುವವರಿಗೆ ಆಮ್ಲಜನಕ ಕಿಟ್ ವಿತರಿಸಿದ್ದು ಮಾತ್ರವಲ್ಲದೆ ಅವುಗಳನ್ನು ಬಳಸುವ ವಿಧವನ್ನೂ ತಿಳಿಸುತ್ತಾರೆ.
ಯಾವ ರೋಗಿಗೆ ಯಾವ ಮಟ್ಟದಲ್ಲಿ ಆಕ್ಸಿಜನ್ ಒದಗಿಸಬೇಕೆಂದು ವೈದ್ಯರನ್ನು ಸಂಪರ್ಕಿಸಿ ತಿಳಿಯಬೇಕೆಂದೂ ಅವರು ಕುಟುಂಬಗಳಿಗೆ ತಿಳಿಸುತ್ತಾರೆ. ತಮ್ಮ ಅಚ್ಚುಮೆಚ್ಚಿನ ಎಸ್‍ಯುವಿ ಮಾರಾಟ ಮಾಡಿದ್ದಕ್ಕಾಗಿ ಬೇಸರವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲ, ಒಬ್ಬರ ಜೀವ ಉಳಿಸಲು ಒಂದು ಕಾರನ್ನು ಬಿಟ್ಟುಕೊಡುವುದು ಕಷ್ಟವಲ್ಲ. ಈ ಕಾರ್ಯಕ್ಕಾಗಿ ಒಂದೇ ಒಂದು ಕುಟುಂಬದ ಆಶೀರ್ವಾದ ದೊರೆತರೂ ಸಾಕು, ಮುಂದೊಂದು ದಿನ ನಾನು ಇಂತಹ ನಾಲ್ಕು ಕಾರುಗಳನ್ನು ಖರೀದಿಸಬಲ್ಲೆ,'' ಎಂದು ಅವರು ಹೇಳುತ್ತಾರೆ.