×
Ad

ಇದೇ ಮೊದಲ ಬಾರಿಗೆ ಪೆಟ್ರೋಲ್‌ಗಿಂತಲೂ ದುಬಾರಿಯಾದ ಡೀಸೆಲ್

Update: 2020-06-24 12:46 IST

ಹೊಸದಿಲ್ಲಿ, ಜೂ.24: ಸತತ 18ನೇ ದಿನವೂ ಇಂಧನ ಬೆಲೆಯಲ್ಲಿ ಏರಿಕೆಯಾಗಿದ್ದು ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ತುಟ್ಟಿಯಾಗಿದೆ. ಸರಕಾರಿ ಅಧೀನದ ತೈಲ ಮಾರಾಟ ಸಂಸ್ಥೆಗಳು ಬುಧವಾರ ಡೀಸೆಲ್ ಬೆಲೆಯನ್ನು ಲೀಟರ್‌ಗೆ 48 ಪೈಸೆ ಹೆಚ್ಚಿಸಿವೆ. ಇದರಿಂದ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನು ಹಿಂದಿಕ್ಕಿದೆ.

ಬುಧವಾರ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 79.76 ರೂ. ಆಗಿದ್ದರೆ ಡೀಸೆಲ್ ಬೆಲೆ ಲೀಟರ್‌ಗೆ 79.88 ರೂ. ಆಗಿತ್ತು. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 86.54 ರೂ, ಡೀಸೆಲ್ ಬೆಲೆ ಲೀಟರ್‌ಗೆ 78.22 ರೂ, ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 83.04 ರೂ, ಡೀಸೆಲ್ ಬೆಲೆ ಲೀಟರ್‌ಗೆ 77.17 ರೂ, ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 81.45 ರೂ, ಡೀಸೆಲ್ ಬೆಲೆ ಲೀಟರ್‌ಗೆ 75.06 ರೂ. ಆಗಿತ್ತು . ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆ ಕ್ಷಿಪ್ರವಾಗಿ ಹೆಚ್ಚುತ್ತಿದ್ದು ಜಾಗತಿಕ ಬೆಲೆ ಪ್ರವೃತ್ತಿಯನ್ನು ತೈಲ ಸಂಸ್ಥೆಗಳು ಅನುಸರಿಸಿದರೆ ಡೀಸೆಲ್ ಬೆಲೆ ಅಧಿಕವಾಗಿಯೇ ಉಳಿಯಲಿದೆ .

ಹಲವು ವರ್ಷಗಳ ಬಳಿಕ ಈ ರೀತಿ ಆಗಿದ್ದು ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಸ್ವರೂಪವನ್ನು ಬದಲಾಯಿಸದಿದ್ದರೆ ಈ ಹೆಚ್ಚಳ ದೀರ್ಘಾವಧಿಗೆ ಉಳಿದುಕೊಳ್ಳುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತೈಲ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿ ಸರಕಾರ ಕೊರೋನ ಸೋಂಕು ಹಾಗೂ ತೈಲ ಬೆಲೆಯನ್ನು ಅನ್‌ಲಾಕ್ ಮಾಡಿದೆ ಎಂದು ಟ್ವೀಟ್ ಮಾಡಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News