ಪಿಪಿಐ ಸಾಧನಗಳ ಉತ್ಪಾದನಾ ಮಾನದಂಡ ಸಡಿಲಿಕೆ
ಹೊಸದಿಲ್ಲಿ, ಜೂ.24: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಗುಣಮಟ್ಟದ ಸಲಕರಣೆಗಳ ಪೂರೈಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಮೂರು ವಿಧದ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಉತ್ಪಾದನಾ ಸಂಸ್ಥೆಯೊಳಗೆ ಪರೀಕ್ಷಿಸುವ ಮಾನದಂಡವನ್ನು ಸಡಿಲಿಸಿರುವುದಾಗಿ ಸರಕಾರದ ಆದೇಶ ತಿಳಿಸಿದೆ. ಫಿಲ್ಟರ್ ಹಾಫ್ ಮಾಸ್ಕ್(ಗಲ್ಲ, ಬಾಯಿ, ಮೂಗು ಮುಚ್ಚುವ ಮಾಸ್ಕ್), ಶಸ್ತ್ರಚಿಕಿತ್ಸೆಯ ಮಾಸ್ಕ್, ಕಣ್ಣಿನ ರಕ್ಷಣೆಯ ಸಾಧನಗಳ ಉತ್ಪಾದನೆಯ ಮಾನದಂಡವನ್ನು ಸಡಿಲಿಸಿರುವುದಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್(ಬಿಐಎಸ್)ನ ಹೇಳಿಕೆ ತಿಳಿಸಿದೆ.
ಈ ಹಿಂದೆ , ತಮ್ಮಲ್ಲಿ ಪರೀಕ್ಷಿಸುವ ವ್ಯವಸ್ಥೆ ಇರುವ ಸಂಸ್ಥೆಗಳಿಗೆ ಮಾತ್ರ ಇವುಗಳ ಉತ್ಪಾದನೆಗೆ ಅನುಮತಿ ನೀಡಲಾಗುತ್ತಿತ್ತು. ಹೊಸ ಮಾನದಂಡದಂತೆ, ಸಂಸ್ಥೆಗಳು ಉತ್ಪಾದಿಸಿದ ಪಿಪಿಐ ಸಾಧನಗಳ ಗುಣಮಟ್ಟವನ್ನು ಬಿಐಎಸ್ ಮಾನ್ಯತೆ ಪಡೆದ, ಅಥವಾ ಬಿಐಎಸ್ ಪಟ್ಟಿಯಲ್ಲಿರುವ ಸರಕಾರಿ ಅಥವಾ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಬಹುದಾಗಿದೆ. ಬಿಐಎಸ್ ಉತ್ಪನ್ನ ಪ್ರಮಾಣೀಕರಣ ಯೋಜನೆಯ ವ್ಯಾಪ್ತಿಯಡಿ ಇನ್ನಷ್ಟು ಉತ್ಪಾದಕರನ್ನು ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿಐಎಸ್ ಪ್ರಮಾಣೀಕೃತ ಪಿಪಿಇಗಳು ಲಭಿಸುತ್ತದೆ ಎಂದು ಬಿಐಎಸ್ ಹೇಳಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಮಾಸ್ಕ್‌ಗಳು ಹಾಗೂ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಅಗತ್ಯದ ವಸ್ತುಗಳೆಂದು ಸರಕಾರ ಘೋಷಿಸಿದೆ.