ಜಾಮಿಯಾ ಕ್ಯಾಂಪಸ್ ನೊಳಗೆ ನಡೆದ ಪೊಲೀಸ್ ಹಿಂಸಾಚಾರಕ್ಕೆ ವಿದ್ಯಾರ್ಥಿಗಳೇ ಹೊಣೆ ಎಂದ ಎನ್‌ಎಚ್‌ಆರ್‌ಸಿ !

Update: 2020-06-26 16:23 GMT

ಹೊಸದಿಲ್ಲಿ, ಜೂ.26: ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿವಿಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ಸುಮಾರು 7 ತಿಂಗಳ ಬಳಿಕ ವರದಿ ಬಿಡುಗಡೆಗೊಳಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಈ ಹಿಂಸಾಚಾರಕ್ಕೆ ವಿದ್ಯಾರ್ಥಿಗಳೇ ಕಾರಣ ಎಂದು ದೂಷಿಸಿದ್ದು, ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ವಿದ್ಯಾರ್ಥಿಗಳನ್ನು ಮುಂದಿಟ್ಟು ಪ್ರತಿಭಟನೆ ಆಯೋಜಿಸಿದ ನೈಜ ಪಾತ್ರಧಾರಿಗಳು ಹಾಗೂ ಅವರ ಉದ್ದೇಶವನ್ನು ಬಯಲಿಗೆಳೆಯಬೇಕಿದೆ ಎಂದುThewire.in ವರದಿ ಮಾಡಿದೆ.

ಜಾಮಿಯಾ ವಿವಿಯ ಲೈಬ್ರೆರಿಯ ಒಳಗೆ ನುಗ್ಗಿದ ಸಮವಸ್ತ್ರ ಧರಿಸಿದ್ದ ವ್ಯಕ್ತಿಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ವೀಡಿಯೊ ಮತ್ತು ವರದಿ ಭಾರತದಲ್ಲಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾಧ್ಯಮದಲ್ಲಿ ಪ್ರಮುಖ ಸುದ್ದಿಯಾಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ 2019ರ ಡಿಸೆಂಬರ್ 15ರಂದು ಜಾಮಿಯಾ ವಿವಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಕಾನೂನುಬಾಹಿರ ಸಭೆಯಾಗಿತ್ತು ಮತ್ತು ಪೊಲೀಸರು ಕ್ರಮ ಕೈಗೊಳ್ಳುವಂತೆ ಸ್ವತಃ ವಿದ್ಯಾರ್ಥಿಗಳೇ ಆಹ್ವಾನ ನೀಡಿದಂತಾಗಿದೆ ಎಂಬ ತಮ್ಮ ಗ್ರಹಿಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಎಸ್‌ಎಸ್‌ಪಿ ಮಂಝಿಲ್ ಸೈನಿ ನೇತೃತ್ವದ ಎನ್‌ಎಚ್‌ಆರ್‌ಸಿ ತಂಡ ವರದಿ ನೀಡಿದೆ ಎಂಬ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪ್ರತಿಭಟನಾಕಾರರು ಹಿಂಸೆಗೆ ಮುಂದಾದರು, ಸರಕಾರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಗೊಳಿಸಿದರು ಮತ್ತು ಪೊಲೀಸ್ ಅಧಿಕಾರಿಗಳತ್ತ ಕಲ್ಲು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆದರು ಎಂದು ವರದಿಯಲ್ಲಿ ಉಲ್ಲೇಖಿಸುವ ಮೂಲಕ, ಘಟನೆಯ ಸಂಪೂರ್ಣ ಹೊಣೆಗೆ ವಿದ್ಯಾರ್ಥಿಗಳೇ ಕಾರಣ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ಬೃಹತ್ ಪಿತೂರಿ ಅಡಗಿದೆ. ಜಾಮಿಯಾ ವಿವಿಯಲ್ಲಿ ನಡೆದಿರುವ ಎಲ್ಲಾ ಪ್ರತಿಭಟನೆಯ ಹಿಂದಿರುವ ಉದ್ದೇಶ ಮತ್ತು ಇದರ ನಿಜವಾದ ಪಾತ್ರಧಾರಿಗಳನ್ನು ಬಯಲಿಗೆಳೆಯಬೇಕಾಗಿದೆ ಎಂದು ವರದಿ ತಿಳಿಸಿದೆ.

ಈ ಪ್ರತಿಭಟನೆಯನ್ನು ಸ್ಥಳೀಯ ರಾಜಕೀಯ ಮುಖಂಡರು ಸಂಯೋಜಿಸಿದ್ದರು ಮತ್ತು ಹಲವು ಬಾರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅಲ್ಲಿ ಅಕ್ರಮವಾಗಿ ಗುಂಪು ಸೇರಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಹೀಗಿರುವಾಗ , ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಬಳಸಿದ್ದಾರೆ. ಪ್ರತಿಭಟನಾಕಾರರು ಅಲ್ಲಿಂದ ಚದುರಿಹೋಗುವ ಸಂದರ್ಭ ರಸ್ತೆಯುದ್ದಕ್ಕೂ ಆಸ್ತಿಪಾಸ್ತಿಗಳಿಗೆ ಹಾನಿ ಎಸಗಿದ್ದಾರೆ. ಅಕ್ರಮವಾಗಿ ಗುಂಪು ಸೇರಿದ್ದ ಪ್ರತಿಭಟನಾಕಾರರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ಅಲ್ಲಿಂದ ಮುಂದೆ ಸಾಗಿ ವಿವಿಯ ಆವರಣಕ್ಕೆ ಪ್ರವೇಶಿಸಿ ಪೊಲೀಸರ ಮೇಲೆ ಕಲ್ಲೆಸೆತದಲ್ಲಿ ತೊಡಗಿದ್ದ ಕಾರಣ ಪೊಲೀಸರು ವಿವಿಯ ಆವರಣವನ್ನು ಪ್ರವೇಶಿಸಬೇಕಾಯಿತು. ಆಗ ಕೆಲವರು ಲೈಬ್ರರಿಗೆ ನುಗ್ಗಿದಾಗ ಅಲ್ಲಿದ್ದ ವಿದ್ಯಾರ್ಥಿಗಳು ಪೊಲೀಸರನ್ನು ತಡೆದರು. ಆಗ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪೊಲೀಸರು ವಿವಿ ಆವರಣದಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ವಿದ್ಯಾರ್ಥಿಗಳ ಆರೋಪವನ್ನು ನಿರಾಕರಿಸಿದ್ದು, ಪ್ರತಿಭಟನೆ ಶಾಂತಿಯುತವಾಗಿದ್ದರೆ ಪೀಠೋಪಕರಣಗಳನ್ನು ನಾಶಗೊಳಿಸುವ ಸಂಭವವೇ ಇರುತ್ತಿರಲಿಲ್ಲ. ಅಲ್ಲದೆ ವಿವಿ ಗೇಟ್‌ನ ಬಳಿ ವಿದ್ಯಾರ್ಥಿಗಳ ಗುರುತಿನ ಚೀಟಿ ತಪಾಸಣೆ ನಡೆಸುವ ವ್ಯವಸ್ಥೆ ಇರಲಿಲ್ಲ. ಯಾರು ಬೇಕಾದರೂ ಒಳಗೆ ಪ್ರವೇಶಿಸಬಹುದಿತ್ತು ಎಂದು ಹೇಳಲಾಗಿದೆ.

ವರದಿಯ ಶಿಫಾರಸು ವಿಭಾಗದಲ್ಲಿ, ವಾಚನಾಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಅನಗತ್ಯವಾಗಿ ಲಾಠಿ ಬೀಸಿದ ಹಾಗೂ ವಿವಿ ಆವರಣದೊಳಗೆ ಅಶ್ರುವಾಯು ಶೆಲ್ ಬಳಸಿದ ಪೊಲೀಸ್ ಸಿಬ್ಬಂದಿಗಳನ್ನು ಅಧಿಕಾರಿಗಳು ಗುರುತಿಸಬೇಕು ಮತ್ತು ಅವರ ವಿರುದ್ಧ , ಸಂಬಂಧಿತ ಪೊಲೀಸ್ ಇಲಾಖೆಗಳು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಪೊಲೀಸರ ವಿರುದ್ಧ ಸೌಮ್ಯ ಟೀಕೆ

ಪೊಲೀಸರು ವಿವಿಯ ಆವರಣದೊಳಗೆ ಇದ್ದ ವಿದ್ಯಾರ್ಥಿಗಳ ವಿರುದ್ಧ ಅಸಮಾನ ಬಲ ಪ್ರಯೋಗಿಸಿದ್ದಾರೆ ಎಂಬ ದೂರಿನ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದು , ಲೈಬ್ರೆರಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸುವುದನ್ನು ತಪ್ಪಿಸಬಹುದಿತ್ತು ಎಂದು ಪೊಲೀಸರನ್ನು ಸೌಮ್ಯವಾಗಿ ಟೀಕಿಸಲಾಗಿದೆ. ಅಲ್ಲದೆ ಲೈಬ್ರೆರಿಯೊಳಗೆ ಅಶ್ರುವಾಯು ಶೆಲ್ ಪತ್ತೆಯಾಗಿರುವ ಬಗ್ಗೆ ಉಲ್ಲೇಖಿಸಿ, ಇದು ಪೊಲೀಸರ ಬೇಜವಾಬ್ದಾರಿಯುತ ನಡೆಯಾಗಿದೆ. ಇದನ್ನು ತಪ್ಪಿಸಬಹುದಿತ್ತು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News