ಬಿಹಾರದ ಐಎಎಸ್ ಅಧಿಕಾರಿ ಸಹಿತ 25 ಸಾವಿರ ಮಂದಿಗೆ ಜಮ್ಮುಕಾಶ್ಮೀರದ ವಾಸ್ತವ್ಯ ಪ್ರಮಾಣ ಪತ್ರ

Update: 2020-06-26 16:15 GMT

ಶ್ರೀನಗರ,ಜೂ.25: ಜಮ್ಮುಕಾಶ್ಮೀರ ಸರಕಾರದಿಂದ ಇತ್ತೀಚೆಗೆ ವಾಸ್ತವ್ಯ ಪ್ರಮಾಣ ಪತ್ರ ಪಡೆದಿರುವ 25 ಸಾವಿರ ಮಂದಿಯಲ್ಲಿ ಬಿಹಾರದ ಹಿರಿಯ ಐಎಎಸ್ ಅಧಿಕಾರಿ ನವೀನ್ ಕುಮಾರ್ ಚೌಧುರಿ ಕೂಡಾ ಸೇರಿದ್ದಾರೆ. ಚೌಧುರಿ ಅವರು ಜಮ್ಮುಕಾಶ್ಮೀರದಲ್ಲಿ ವಾಸ್ತವ್ಯ ಪ್ರಮಾಣಪತ್ರ ಪಡೆದಿರುವ ಹೊರರಾಜ್ಯದ ಮೊದಲ ಐಎಎಸ್ ಅಧಿಕಾರಿ ಆಗಿದ್ದಾರೆ.

ಜಮ್ಮುಕಾಶ್ಮೀರದಲ್ಲಿ ವಾಸ್ತವ್ಯ ಪ್ರಮಾಣಪತ್ರಕ್ಕಾಗಿ ಈವರೆಗೆ 33,157 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವರ ಪೈಕಿ 25 ಸಾವಿರಕ್ಕೂ ಅಧಿಕ ಮಂದಿಗೆ ಅದನ್ನು ನೀಡಲಾಗಿದೆ. ಜಮ್ಮುವಿನ 10 ಜಿಲ್ಲೆಗಳಿಂದ 32 ಸಾವಿರ ಅರ್ಜಿಗಳು ಬಂದಿದ್ದರೆ, ಕಾಶ್ಮೀರ ಕಣಿವೆಯಿಂದ ಕೇವಲ 720 ಅರ್ಜಿಗಳು ಬಂದಿದ್ದವು. ಕೃಷಿ ಉತ್ಪಾದನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನವೀನ್ ಕುಮಾರ್ ಚೌಧುರಿ ಅವರು ಜಮ್ಮುಕಾಶ್ಮೀರದ ಐಟಿ, ಹಣಕಾಸು ಹಾಗೂ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.

 ನೂತನ ವಾಸ್ತವ್ಯ ಕಾನೂನಿನ ಪ್ರಕಾರ ಜಮ್ಮುಕಾಶ್ಮೀರದಲ್ಲಿ 15 ವರ್ಷಗಳ ಕಾಲ ನೆಲೆಸಿದ್ದವರಿಗೆ ಅಥವಾ 7 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿರುವವರಿಗೆ ಹಾಗೂ ಜಮ್ಮುಕಾಶ್ಮೀರದಲ್ಲಿರುವ ಶಿಕ್ಷಣಸಂಸ್ಥೆಗಳ ಮೂಲಕ 10, 12ನೇ ತರಗತಿಯ ಪರೀಕ್ಷೆಗಳಿಗೆ ಬರೆದವರಿಗೆ ವಾಸ್ತವ್ಯ ಪ್ರಮಾಣ ಪತ್ರ ದೊರೆಯಲಿದೆ.

 ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಎಂಟು ತಿಂಗಳುಗಳ ಬಳಿಕ, ಎಪ್ರಿಲ್ 1ರಂದು ಕೇಂದ್ರದ ಬಿಜೆಪಿ ಸರಕಾರವು ಜಮ್ಮುಕಾಶ್ಮೀರ ವಾಸ್ತವ್ಯ ಕಾನೂನನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ವಾಸ್ತವ್ಯ ಪ್ರಮಾಣ ಪತ್ರವನ್ನು ಹೊಂದಿದವರು, ಜಮ್ಮುಕಾಶ್ಮೀರದಲ್ಲಿ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ.

 ಸಂವಿಧಾನದ 370ನೇ ವಿಧಿ ರದ್ದತಿಗೆ ಮುನ್ನ ಜಮ್ಮುಕಾಶ್ಮೀರದ ಎಲ್ಲಾ ಉದ್ಯೋಗಗಳು ಆ ರಾಜ್ಯದಲ್ಲಿ ಖಾಯಂ ವಾಸ್ತವ್ಯವಿದ್ದವರಿಗೆ ಮಾತ್ರ ಲಭ್ಯವಿತ್ತು. ಜಮ್ಮುಕಾಶ್ಮೀರದ ನೂತನ ವಾಸ್ತವ್ಯ ಕಾನೂನುಗಳನ್ನು ವಿರೋಧಪಕ್ಷಗಳು ಆರಂಭದಿಂದಲೂ ವಿರೋಧಿಸುತ್ತಿವೆ. ಈ ಕಾನೂನಿನ ಹಿಂದೆ ದುಷ್ಟ ಸಂಚೊಂದು ಅಡಗಿವೆ ಎಂದು ಅವು ಹೇಳಿವೆ.

 “ಜಮ್ಮುಕಾಶ್ಮೀರದ ನೂತನ ಕಾನೂನುಗಳ ಕುರಿತಾಗಿ ನಮಗಿರುವ ಅಪನಂಬಿಕೆಗಳು ಈಗ ಮುನ್ನೆಲೆಗೆ ಬರುತ್ತಿವೆ” ಎಂದು ಅವು ಆಪಾದಿಸಿವೆ.

‘‘ಜಮ್ಮುಕಾಶ್ಮೀರ ಸರಕಾರ ಜಾರಿಗೆ ತಂದಿರುವ ವಾಸ್ತವ್ಯ ಕಾನೂನು ಹಾಗೂ ಆದೇಶ ಅಕ್ರಮ, ಅಸಂವಿಧಾನಿಕವಾಗಿದ್ದು, ಅವು ಸ್ವೀಕಾರಾರ್ಹವಲ್ಲವೆಂದು “ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ವಕ್ತಾರ ಇಮ್ರಾನ್ ನಬಿ ದಾರ್ ತಿಳಿಸಿದ್ದಾರೆ. ಜಮ್ಮುಕಾಶ್ಮೀರದ ಜನತೆಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಅವು ಹೊಂದಿವೆ’’ ಎಂದು ಅವರು ಆರೋಪಿಸಿದ್ದಾರೆ.

ನೂತನ ವಾಸ್ತವ್ಯ ಕಾಯ್ದೆಗೆ ಜಮ್ಮುಕಾಶ್ಮೀರದ ಪ್ರಮುಖ ಪಕ್ಷವಾದ ಪಿಡಿಪಿ ತೀವ್ರವಾಗಿ ವಿರೋಧಿಸಿದೆ. ಜನಸಂಖ್ಯಾಸಂರಚನೆಯ ಬದಲಾವಣೆ ಹಾಗೂ ಹಕ್ಕುಗಳ ನಿರಾಕರಣೆಯು ಜಮ್ಮುಕಾಶ್ಮೀರದ ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸಲಿದೆ. ಇದನ್ನು ಎಲ್ಲಾ ವಿಧದ ಶಾಂತಿಯುತ ಪ್ರಜಾಸತ್ತಾತ್ಮಕ ವಿಧಾನಗಳಿಂದ ವಿರೋಧಿಸಲಾಗುವುದೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News