ನಿಮಗೆ ಗೊತ್ತಿರಲಿ, ನಿಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ನ ನೀಲಿ ಬೆಳಕು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ

Update: 2020-06-27 14:01 GMT

ನಿಮ್ಮ ಫೋನ್,ಲ್ಯಾಪ್‌ಟಾಪ್ ಅಥವಾ ಟಿವಿ ಪರದೆ ಇತ್ಯಾದಿಗಳಿಂದ ಹೊರಸೂಸುವ ನೀಲಿ ಬಣ್ಣದ ಬೆಳಕು ನಿಮ್ಮ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುವಂತೆ ನಿಮ್ಮ ಚರ್ಮಕ್ಕೂ ಹಾನಿಯನ್ನುಂಟು ಮಾಡುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಎಂದಾದರೂ ಪ್ರಯತ್ನಿಸಿದ್ದೀರಾ? ಹೆಚ್ಚಿನವರು ಕಣ್ಣುಗಳಿಗೆ ರಕ್ಷಣೆ ಪಡೆದುಕೊಳ್ಳಲು ನೀಲಿ ಬೆಳಕನ್ನು ತಡೆಯುವ ಕನ್ನಡಕಗಳನ್ನು ಬಳಸುತ್ತಾರೆ,ಆದರೆ ಚರ್ಮವನ್ನು ರಕ್ಷಿಸಿಕೊಳ್ಳುವುದು ಹೇಗೆ? ನೀವು ನಿಮ್ಮ ಹೆಚ್ಚಿನ ಸಮಯವನ್ನು ಫೋನ್ ಅಥವಾ ಲ್ಯಾಪ್‌ಟಾಪ್‌ನೊಂದಿಗೆ ಕಳೆಯುವ ಗುಂಪಿಗೆ ಸೇರಿದ್ದರೆ ನೀವು ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದೆ.

ಏನಿದು ನೀಲಿ ಬೆಳಕು?

 ನೀಲಿ ಬೆಳಕು ಮಾನವನ ಕಣ್ಣು ನೋಡಬಹುದಾದ ಕಡಿಮೆ ತರಂಗಾಂತರದ ಅಧಿಕ ಶಕ್ತಿಯ ಬೆಳಕು ಆಗಿದೆ. ವಾತಾವರಣದಿಂದ ಹಿಡಿದು ಟ್ಯೂಬ್ ಲೈಟ್‌ಗಳು ಮತ್ತು ಬಲ್ಬ್‌ಗಳು,ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳವರೆಗೆ ಎಲ್ಲ ಕಡೆಯೂ ನೀಲಿ ಬೆಳಕು ಇದೆ. ಸುದೀರ್ಘ ಸಮಯ ನೀಲಿ ಬೆಳಕಿಗೆ ಒಡ್ಡಿಕೊಂಡಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಲೆನೋವು,ಕಣ್ಣುಗಳಿಗೆ ಆಯಾಸ,ಬಳಲಿಕೆ ಇವು ಅತ್ಯಂತ ಹೆಚ್ಚು ಸಾಮಾನ್ಯವಾದ ಸಮಸ್ಯೆಗಳಾಗಿವೆ. ಸೂರ್ಯ ಕೂಡ ನೀಲಿ ಬೆಳಕನ್ನು ಹೊರಹೊಮ್ಮಿಸುವುದರಿಂದ ನೈಸರ್ಗಿಕವಾಗಿಯೂ ನಾವು ಅದಕ್ಕೆ ಒಡ್ಡಿಕೊಂಡಿರುತ್ತೇವೆ,ಆದರೆ ಸೂರ್ಯನಿಂದ ಹೊಮ್ಮುವ ಈ ಬೆಳಕು ನಿಯಂತ್ರಿತ ರೂಪದಲ್ಲಿರುವುದರಿಂದ ನಿಜಕ್ಕೂ ನಮಗೆ ನೆರವಾಗುತ್ತವೆ. ಆದರೆ ಹೀಗೆ ಒಡ್ಡಿಕೊಳ್ಳುವಿಕೆ ಸುದೀರ್ಘ ಸಮಯ ಮುಂದುವರಿದಾಗ ಅದು ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ.

  ಮಧ್ಯಾಹ್ನದ ಬಿಸಿಲಿನಲ್ಲಿ 20 ನಿಮಿಷ ಕಳೆಯುವುದು ಮತ್ತು ಲ್ಯಾಪ್‌ಟಾಪ್‌ನಲ್ಲಿ 7-8 ಗಂಟೆಗಳ ಕಾಲ ಕೆಲಸ ಮಾಡುವುದು ಇವೆರಡೂ ನಮ್ಮ ಚರ್ಮದ ಮೇಲೆ ಸಮಾನ ಪರಿಣಾಮವನ್ನು ಬೀರುತ್ತವೆ. ನೀವು ಪ್ರಖರ ಬಿಸಿಲಿನಲ್ಲಿದ್ದಾಗ ಅದಕ್ಕೆ ತೆರೆದುಕೊಂಡ ಭಾಗದ ಚರ್ಮವು ಕಂದುಬಣ್ಣಕ್ಕೆ ತಿರುಗುತ್ತದೆ. ಇದೇ ರೀತಿ ನೀವು ತುಂಬ ಸಮಯ ಲ್ಯಾಪ್‌ಟಾಪ್ ಅಥವಾ ಫೋನ್‌ನ ಎದುರಿಗೆ ಕಳೆದಾಗ ಮುಖದ ಚರ್ಮವು ಕಂದು ಬಣ್ಣಕ್ಕೆ ತಿರುಗುತ್ತದೆ. ಇದರ ಜೊತೆಗೆ ಅಕಾಲ ವಯಸ್ಸಾಗುವಿಕೆ,ಚರ್ಮದ ಉರಿಯೂತ,ಹೈಪರ್ ಪಿಗ್ಮೆಂಟೇಷನ್ ಮತ್ತು ಸುಕ್ಕುಗಳಿಗೂ ಅದು ಕಾರಣವಾಗುತ್ತದೆ. ನಿಮ್ಮ ಚರ್ಮ ಆರೋಗ್ಯಯತವಾಗಿರಬೇಕು ಮತ್ತು ಹೊಳಪಿನಿಂದ ಕೂಡಿರಬೇಕು ಎಂದು ನೀವು ಬಯಸಿದ್ದರೆ ನೀಲಿ ಬೆಳಕಿಗೆ ಅತಿಯಾಗಿ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು.

ಚರ್ಮದ ರಕ್ಷಣೆಗೆ ಕೆಲವು ಟಿಪ್ಸ್

  ನೀವು ಡಿಜಿಟಲ್ ಪರದೆಗಳು ಮತ್ತು ಪೋನ್‌ಗಳೊಂದಿಗೆ ಹೆಚ್ಚು ಸಮಯವನ್ನು ಕಳೆಯುವ ವ್ಯಕ್ತಿಯಾಗಿದ್ದರೆ ನೀಲಿ ಬೆಳಕಿನಿಂದ ಹಾನಿಯನ್ನು ತಗ್ಗಿಸಲು ಕೆಲವು ಉಪಾಯಗಳಿಲ್ಲಿವೆ.

►ನೈಟ್‌ಮೋಡ್‌ಗೆ ಬದಲಾಗಿ

 ರಾತ್ರಿ ವೇಳೆಗಳಲ್ಲಿ ಕತ್ತಲಿನಲ್ಲಿ ನಾವು ಫೋನ್‌ನ್ನು ಬಳಸುತ್ತಿರುವಾಗ ಅದರಿಂದ ಹೊರಹೊಮ್ಮುವ ನೀಲಿ ಬೆಳಕು ನೇರವಾಗಿ ಚರ್ಮವನ್ನು ಪ್ರವೇಶಿಸುವುದರಿಂದ ಹೆಚ್ಚಿನ ಹಾನಿಯುಂಟಾಗುತ್ತದೆ. ಇದನ್ನು ತಡೆಯಲು ಸದಾ ಫೋನ್‌ನ ಪರದೆಯನ್ನು ನೈಟ್ ಮೋಡ್‌ನಲ್ಲಿರಿಸ ಬೇಕು ಮತ್ತು ಇದು ಬೆಳಕನ್ನು ನೀಲಿ ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಿಸುತ್ತದೆ. ಅಲ್ಲದೆ ನಿಮ್ಮ ಫೋನ್ ಅನ್ನು ನಿಮ್ಮ ಮುಖಕ್ಕೆ ಅತಿ ಸಮೀಪದಲ್ಲಿ ಹಿಡಿದುಕೊಳ್ಳಬೇಡಿ.

ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಬಳಸಿ ಆ್ಯಂಟಿ ಆಕ್ಸಿಡೆಂಟ್‌ಗಳು ಅಥವಾ ಉತ್ಕರ್ಷಣ ನಿರೋಧಕಗಳು ನೀಲಿ ಬೆಳಕಿನಿಂದ ಉಂಟಾಗುವ ಹಾನಿಯನ್ನು ಪರಿಣಾಮಕಾರಿಯಾಗಿ ತಡೆಯಬಲ್ಲವು. ಹೀಗಾಗಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವ ಆಹಾರಗಳನ್ನು ನಾವು ಸೇವಿಸಬೇಕು. ಅಲ್ಲದೆ ಮಾಯಶ್ಚರೈಸರ್, ಫೇಸ್ ಪ್ಯಾಕ್ ಮತ್ತು ಸೀರಮ್ ರೂಪದಲ್ಲಿ ಉತ್ಕರ್ಷಣ ನಿರೋಧಗಳನ್ನು ಬಳಸಬೇಕು.

►ನೈಟ್ ಫೇಸ್ ಸೀರಮ್ ಬಳಸಿ

ನಾವು ರಾತ್ರಿ ಮಲಗಿದ್ದಾ ಸ್ವಯಂ ರಿಪೇರಿ ಮಾಡಿಕೊಳ್ಳಲು ಮತ್ತು ಪುನಃಶ್ಚೇತನಗೊಳ್ಳಲು ಚರ್ಮಕ್ಕೆ ಸಾಕಷ್ಟು ಸಮಯಾವಕಾಶವಿರು ತ್ತದೆ. ಮುಖದ ಚರ್ಮಕ್ಕೆ ಆಗಿರುವ ಹಾನಿಯನ್ನು ಕನಿಷ್ಠಗೊಳಿಸಲು ರಾತ್ರಿ ಮಲಗುವ ಮುನ್ನ ಹೈಲಾರಾನಿಕ್ ಆ್ಯಸಿಡ್ ನೈಟ್ ಸ್ಕಿನ್ ಕ್ರೀಮ್‌ನ್ನು ಲೇಪಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News