ಬಿಹಾರ ಆಶ್ರಯ ಧಾಮ ಲೈಂಗಿಕ ದೌರ್ಜನ್ಯ ಪ್ರಕರಣ: ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಬಿಐ ಶಿಫಾರಸು

Update: 2020-06-27 15:04 GMT

ಹೊಸದಿಲ್ಲಿ, ಜೂ.27: ಬಿಹಾರದ 19 ಆಶ್ರಯಧಾಮಗಳಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ 17 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿರುವುದಾಗಿ ಸಿಬಿಐ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಮುಝಫರ್‌ಪುರ ಆಶ್ರಯಧಾಮ ಮತ್ತು ಮೋತಿಹಾರಿಯಲ್ಲಿರುವ ಆಶ್ರಯಧಾಮಗಳಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಇನ್ನಷ್ಟು ವಿಸ್ತೃತ ತನಿಖೆಯ ಅಗತ್ಯವಿದೆ. 17 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು 13 ಪ್ರಕರಣಗಳ ಕುರಿತ ಅಂತಿಮ ತನಿಖಾ ವರದಿಯಲ್ಲಿ ಸಂಬಂಧಿತ ಕೋರ್ಟ್‌ಗಳಿಗೆ ಸಲ್ಲಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ತಿಳಿಸಿದೆ.

 ಮುಝಫರ್‌ಪುರ ಆಶ್ರಯಧಾಮದಲ್ಲಿನ ಹಲವು ಬಾಲಕಿಯರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿಚಾರಣೆ ನಡೆಸುತ್ತಿದ್ದ ಸಂದರ್ಭ ರಾಜ್ಯದಲ್ಲಿ ಇತರ 18 ಆಶ್ರಯಧಾಮಗಳಲ್ಲೂ ಇದೇ ರೀತಿಯ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ , ಪ್ರಕರಣಗಳ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ 2018ರ ನವೆಂಬರ್‌ನಲ್ಲಿ ಸಿಬಿಐಗೆ ಸೂಚಿಸಿತ್ತು. ಮುಝಫರ್‌ಪುರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 19 ಜನರನ್ನು ದೋಷಿಗಳೆಂದು ಹೆಸರಿಸಿತ್ತು.

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ನಡೆದ ಪ್ರಾಥಮಿಕ ತನಿಖೆಯನ್ನು ಆಧರಿಸಿ ರಾಜ್ಯದ 10 ಜಿಲ್ಲೆಗಳಲ್ಲಿ ವಿಸ್ತೃತ ತನಿಖೆ ನಡೆಸಲಾಗಿದೆ. ಆಶ್ರಯಧಾಮಗಳನ್ನು ನಿರ್ವಹಿಸುವ ಸರಕಾರೇತರ ಸಂಸ್ಥೆಗಳು (ಎನ್‌ಜಿಒ) ಹಾಗೂ ಸರಕಾರಿ ಅಧಿಕಾರಿಗಳ ನಿರ್ಲಕ್ಷತೆ ಸಾಬೀತಾಗಿದೆ. ಆದ್ದರಿಂದ ಎನ್‌ಜಿಒಗಳ ನೋಂದಣಿ ರದ್ದುಗೊಳಿಸಬೇಕು ಹಾಗೂ ಸರಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿರುವುದಾಗಿ ಸಿಬಿಐ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News