ಒಂದೇ ದಿನ 18,000ಕ್ಕೂ ಹೆಚ್ಚು ಸೋಂಕು ಪ್ರಕರಣ: ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 5.08 ಲಕ್ಷಕ್ಕೆ ಏರಿಕೆ

Update: 2020-06-27 15:10 GMT

ಹೊಸದಿಲ್ಲಿ, ಜೂ.27: ಒಂದೇ ದಿನ 18,552 ಹೊಸ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 5.08 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿಅಂಶ ತಿಳಿಸಿದೆ.

ಶನಿವಾರ ಬೆಳಗ್ಗಿನವರೆಗಿನ 24 ಗಂಟೆಗಳಲ್ಲಿ 18,552 ಹೊಸ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಅವಧಿಯಲ್ಲಿ ಕೊರೋನ ಸೋಂಕಿಗೆ 384 ಜನ ಬಲಿಯಾಗಿದ್ದು ಮೃತಪಟ್ಟವರ ಸಂಖ್ಯೆ 15,685ಕ್ಕೆ ತಲುಪಿದೆ. 1,97,387 ಸಕ್ರಿಯ ಪ್ರಕರಣಗಳಿದ್ದರೆ 2,95,880 ಜನ ಗುಣಮುಖರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಕಳೆದ 8 ದಿನಗಳಿಂದ ಭಾರತದಲ್ಲಿ ಪ್ರತೀ ದಿನ 14,000ಕ್ಕೂ ಹೆಚ್ಚು ಹೊಸ ಪ್ರಕರಣ ದಾಖಲಾಗುತ್ತಿದ್ದು 149 ದಿನಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಅತೀ ಹೆಚ್ಚು ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು ಇಲ್ಲಿ 1,52,765 ಸೋಂಕಿತರಿದ್ದು 7,106 ಜನ ಮೃತಪಟ್ಟಿದ್ದಾರೆ. ದಿಲ್ಲಿಯಲ್ಲಿ 77,240 ಸೋಂಕಿತರಿದ್ದು 2,492 ಮಂದಿ ಮೃತರಾಗಿದ್ದಾರೆ. ತಮಿಳುನಾಡಿನಲ್ಲಿ 74,622 ಸೋಂಕು ಪ್ರಕರಣ, 957 ಸಾವಿನ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಒಂದೇ ದಿನ 542 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಸೋಂಕಿತರ ಪ್ರಮಾಣ 16,190ಕ್ಕೇರಿದೆ. ಹರ್ಯಾಣದಲ್ಲಿ 12,884 ಸೋಂಕು ಹಾಗೂ 211 ಸಾವಿನ ಪ್ರಕರಣ ದಾಖಲಾಗಿದೆ.

ದೇಶದಲ್ಲಿ ದಾಖಲಾದ ಒಟ್ಟು ಸೋಂಕಿನ ಪ್ರಕರಣಗಳಲ್ಲಿ 54.47%ದಷ್ಟು ಪ್ರಕರಣ ದಿಲ್ಲಿ, ಚೆನ್ನೈ, ಥಾಣೆ, ಮುಂಬೈ, ಪಾಲ್ಘಾರ್, ಪುಣೆ, ಹೈದರಾಬಾದ್, ರಂಗಾರೆಡ್ಡಿ, ಅಹ್ಮದಾಬಾದ್ ಮತ್ತು ಫರೀದಾಬಾದ್ ನಗರಗಳಲ್ಲೇ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊರೋನ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಗುವಾಹಟಿಯಲ್ಲಿ ಸೋಮವಾರದಿಂದ ಮುಂದಿನ 2 ವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದೆ ಎಂದು ಅಸ್ಸಾಂ ಸರಕಾರ ಘೋಷಿಸಿದೆ. ಅತೀ ಹೆಚ್ಚು ಸೋಂಕಿತರಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News