ಭಾರತಕ್ಕೆ ಡೇವಿಡ್ ಹೆಡ್ಲಿ ಗಡೀಪಾರು ಅಸಾಧ್ಯ: ಅಮೆರಿಕ
ವಾಶಿಂಗ್ಟನ್, ಜೂ. 27: ಮುಂಬೈ ಭಯೋತ್ಪಾದಕ ದಾಳಿಯ ಪಿತೂರಿಗಾರನೆಂದು ನ್ಯಾಯಾಲಯದಲ್ಲಿ ಸಾಬೀತಾಗಿರುವ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗದು, ಆದರೆ ಸಹಪಿತೂರಿಗಾರ ಹಾಗೂ ಪಾಕಿಸ್ತಾನ ಮೂಲದ ಕೆನಡ ಉದ್ಯಮಿ ತಹವ್ವರ್ ರಾಣಾ ಭಾರತಕ್ಕೆ ಗಡಿಪಾರಾಗುವ ಸಾಧ್ಯತೆಯನ್ನು ಎದುರಿಸುತ್ತಿದ್ದಾನೆ ಎಂದು ಅಮೆರಿಕದ ವಕೀಲರು ಫೆಡರಲ್ ನ್ಯಾಯಾಲಯವೊಂದಕ್ಕೆ ಶುಕ್ರವಾರ ತಿಳಿಸಿದ್ದಾರೆ ಹಾಗೂ ರಾಣಾನ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಡೇವಿಡ್ ಕೋಲ್‌ಮನ್ ಹೆಡ್ಲಿಯ ಬಾಲ್ಯದ ಗೆಳೆಯ 59 ವರ್ಷದ ರಾಣಾನನ್ನು ಜೂನ್ 10ರಂದು ಲಾಸ್ ಏಂಜಲಿಸ್‌ನಲ್ಲಿ ಮರುಬಂಧಿಸಲಾಗಿದೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವ ಆತನನ್ನು ವಿಚಾರಣೆಗೆ ಗುರಿಪಡಿಸುವುದಕ್ಕಾಗಿ ಭಾರತಕ್ಕೆ ಗಡಿಪಾರು ಮಾಡಬೇಕು ಎಂಬ ಭಾರತದ ಕೋರಿಕೆಯ ಹಿನ್ನೆಲೆಯಲ್ಲಿ ಅವನನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ.
2008ರಲ್ಲಿ ಪಾಕಿಸ್ತಾನದ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯು ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ರಾಣಾನನ್ನು ದೇಶಭ್ರಷ್ಟ ಎಂಬುದಾಗಿ ಘೋಷಿಸಲಾಗಿದೆ.
2006 ಮತ್ತು 2008ರ ನಡುವಿನ ಅವಧಿಯಲ್ಲಿ, ಮುಂಬೈ ಭಯೋತ್ಪಾದಕ ದಾಳಿಯ ಪಿತೂರಿಯನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ರಾಣಾ, ಹೆಡ್ಲಿ ಮತ್ತು ಪಾಕಿಸ್ತಾನದ ಇತರ ಹಲವರು ಲಷ್ಕರೆ ತಯ್ಯಬ ಮತ್ತು ಹರ್ಕತುಲ್ ಜಿಹಾದೆ ಇಸ್ಲಾಮಿ ಎಂಬ ಉಗ್ರ ಗುಂಪುಗಳಿಗೆ ನೆರವು ನೀಡಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದರು. ಲಷ್ಕರೆ ತಯ್ಯಬ ಮತ್ತು ಹರ್ಕತುಲ್ ಜಿಹಾದೆ ಇಸ್ಲಾಮಿ ಉಗ್ರ ಗುಂಪುಗಳನ್ನು ಅಮೆರಿಕವು ಉಗ್ರಗಾಮಿ ಸಂಘಟನೆಗಳು ಎಂಬುದಾಗಿ ಘೋಷಿಸಿದೆ.
ಪಾಕಿಸ್ತಾನಿ-ಅಮೆರಿಕನ್ ಆಗಿರುವ ಲಷ್ಕರೆ ತಯ್ಯಬ ಭಯೋತ್ಪಾದಕ ಡೇವಿಡ್ ಹೆಡ್ಲಿಯನ್ನು ಮುಂಬೈ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಬಳಿಕ ಆತನು ಮಾಫಿಸಾಕ್ಷಿದಾರನಾಗಿ ಪರಿವರ್ತನೆಗೊಂಡಿದ್ದು, ಆತನಿಗೆ 35 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾಣಾನ ಗಡಿಪಾರು ಕೋರಿ ಭಾರತ ಸಲ್ಲಿಸಿರುವ ಮನವಿಯನ್ನು ಅಮೆರಿಕ ಇನ್ನಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.