ಸೌಂದರ್ಯವರ್ಧಕಗಳ ವಿವರಗಳಿಂದ ‘ವೈಟ್, ಫೇರ್, ಲೈಟ್’ ತೆಗೆಯಲು ಲೋರಿಯಲ್ ನಿರ್ಧಾರ
ಬರ್ಲಿನ್ (ಜರ್ಮನಿ), ಜೂ. 27: ಜಗತ್ತಿನ ಅತಿ ದೊಡ್ಡ ಸೌಂದರ್ಯವರ್ಧಕಗಳನ್ನು ತಯಾರಿಸುವ ಕಂಪೆನಿ ಲೋರಿಯಲ್, ತನ್ನ ಉತ್ಪನ್ನಗಳ ವಿವರಗಳಿಂದ ‘ಬಿಳಿ’ (ವೈಟ್), ‘ಚೆಲುವು’ (ಫೇರ್) ಮತ್ತು ‘ಶುಭ್ರ’ (ಲೈಟ್) ಪದಗಳನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಕಂಪೆನಿಯ ವಕ್ತಾರರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಟೀಕೆಯ ಹಿನ್ನೆಲೆಯಲ್ಲಿ ಯೂನಿಲಿವರ್ ಕಂಪೆನಿಯು ಇಂಥದೇ ಘೋಷಣೆಯನ್ನು ಮಾಡಿದ ಒಂದು ದಿನದ ಬಳಿಕ ಅದು ಈ ಕ್ರಮವನ್ನು ತೆಗೆದುಕೊಂಡಿದೆ.
ಹೆಚ್ಚಿನ ಏಶ್ಯ, ಆಫ್ರಿಕ ಮತ್ತು ಕೆರಿಬಿಯನ್ ದೇಶಗಳಲ್ಲಿ ಬಳಸಲಾಗುವ ‘ಚರ್ಮ ಬಿಳಿ ಮಾಡುವ’ ಕ್ರೀಮ್‌ಗಳ ಜಾಗತಿಕ ಮಾರುಕಟ್ಟೆಯಲ್ಲಿ ಯೂನಿಲಿವರ್ ಮತ್ತು ಲೋರಿಯಲ್ ಎರಡು ಬೃಹತ್ ಪಾಲುದಾರ ಕಂಪೆನಿಗಳಾಗಿವೆ. ಇಲ್ಲಿನ ಜನರು ಬಿಳಿ ಚರ್ಮ ಉತ್ತಮವೆಂದು ಭಾವಿಸಿಕೊಂಡು ಬಂದ ಹಿನ್ನೆಲೆಯಲ್ಲಿ ‘ಕಪ್ಪು ಚರ್ಮವನ್ನು ಬಿಳಿ ಮಾಡುವ’ ಉದ್ಯಮವು ಬೃಹತ್ ಸ್ವರೂಪದಲ್ಲಿ ಬೆಳೆದಿದೆ.
ಅಮೆರಿಕದಲ್ಲಿ ಪೊಲೀಸರ ಕಸ್ಟಡಿಯಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟ ಬಳಿಕ, ಜಗತ್ತಿನಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದಿರುವ ಸಮಯದಲ್ಲಿ ‘‘ಕಪ್ಪು ಚರ್ಮ ಬಿಳಿ ಮಾಡುವ’’ ಕ್ರೀಮ್‌ಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮುಖ್ಯವಾಗಿ ತನ್ನ ‘ಫೇರ್ ಆ್ಯಂಡ್ ಲವ್ಲಿ’ ಬ್ರಾಂಡ್‌ನ ಕ್ರೀಮ್‌ಗಳನ್ನು ಮಾರುತ್ತಿರುವ ಯೂನಿಲಿವರ್ ಕಂಪೆನಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು, ಏಶ್ಯ ಮತ್ತು ಮಧ್ಯಪ್ರಾಚ್ಯದಲ್ಲಿ ಮಾರಲಾಗುತ್ತಿರುವ ‘ಚರ್ಮ ಬಿಳಿ ಮಾಡುವ’ ಕ್ರೀಮ್‌ಗಳ ಮಾರಾಟವನ್ನು ನಿಲ್ಲಿಸುವುದಾಗಿ ಘೋಷಿಸಿದೆ.