ಕೊರೋನ ಉಚಿತ ಚಿಕಿತ್ಸೆಗೆ ಬಡ ರೋಗಿಗಳಿಂದ ಪುರಾವೆ ಅಪೇಕ್ಷಿಸಬಾರದು: ಹೈಕೋರ್ಟ್
ಮುಂಬೈ, ಜೂ.27: ಕೊರೋನ ಸೋಂಕಿಗೆ ಒಳಗಾಗುವ ಬಡ ಮತ್ತು ನಿರ್ಗತಿಕರು ರಿಯಾಯಿತಿ ದರದ ಅಥವಾ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆಯಬೇಕಿದ್ದರೆ ಪುರಾವೆಯನ್ನು ಒದಗಿಸಬೇಕೆಂದು ನಿರೀಕ್ಷಿಸಲಾಗದು ಎಂದು ಬಾಂ ಬೆ ಹೈಕೋರ್ಟ್ ಹೇಳಿದೆ.
ಬಾಂದ್ರಾದ ಕೊಳೆಗೇರಿ ಪುನರ್ವಸತಿ ಕಟ್ಟಡದ 7 ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ಹೇಳಿಕೆ ನೀಡಿದೆ. ಈ ಏಳು ಮಂದಿ ಕೊರೋನ ಸೋಂಕಿತರಾಗಿದ್ದು ಎಪ್ರಿಲ್ 11ರಿಂದ ಎಪ್ರಿಲ್ 28ರವರೆಗೆ ಕೆಜೆ ಸೋಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇದಕ್ಕೆ 12.5 ಲಕ್ಷ ರೂ. ಶುಲ್ಕ ವಿಧಿಸಲಾಗಿತ್ತು. ಇದರಲ್ಲಿ 10 ಲಕ್ಷ ರೂ. ಹಣವನ್ನು ಇತರರಿಂದ ಸಾಲ ಪಡೆದು ಪಾವತಿಸಿದ್ದರೂ, ಪೂರ್ಣ ಶುಲ್ಕ ಪಾವತಿಸದಿದ್ದರೆ ಡಿಸ್‌ಚಾರ್ಜ್ ಮಾಡುವುದಿಲ್ಲ ಎಂದು ಆಸ್ಪತ್ರೆಯವರು ಎಚ್ಚರಿಸಿದ್ದಾರೆ. ಅಲ್ಲದೆ ಪಿಪಿಇ ಕಿಟ್‌ಗಳಿಗೆ ಅಧಿಕ ಶುಲ್ಕ ವಿಧಿಸಿದ್ದು , ಕೆಲವು ಸೇವೆಗಳನ್ನು ಬಳಸದಿದ್ದರೂ ಶುಲ್ಕ ವಿಧಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯವರು 20% ಬೆಡ್‌ಗಳನ್ನು ಬಡ ರೋಗಿಗಳಿಗೆ ಮೀಸಲಿರಿಸಿದ್ದಾರೆಯೇ ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಜೂನ್ 13ರಂದು ಹೈಕೋರ್ಟ್ ಸೂಚಿಸಿತ್ತು. ಕಳೆದ ವಾರ ವರದಿ ಸಲ್ಲಿಸಿದ್ದ ಅಧಿಕಾರಿಗಳು, ಆಸ್ಪತ್ರೆಯಲ್ಲಿ 20% ಬೆಡ್ ಬಡರೋಗಿಗಳಿಗೆ ಮೀಸಲಿರಿಸಿದ್ದರೂ, ಲಾಕ್‌ಡೌನ್ ಜಾರಿಯಾದಂದಿನಿಂದ ಇದುವರೆಗೆ ಕೇವಲ 3 ಬಡ ರೋಗಿಗಳಿಗೆ ಮಾತ್ರ ಚಿಕಿತ್ಸೆ ಒದಗಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದರು.
ಇದಕ್ಕೆ ಉತ್ತರಿಸಿದ ಆಸ್ಪತ್ರೆಯ ಪ್ರತಿನಿಧಿ, ಅರ್ಜಿದಾರರು ಆರ್ಥಿಕವಾಗಿ ಅಶಕ್ತ ವರ್ಗಕ್ಕೆ ಸೇರಿದವರಾಗಿಲ್ಲ ಮತ್ತು ಬಡವರು ಅಥವಾ ನಿರ್ಗತಿಕರೆಂಬುದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ ಎಂದರು.
ಆದರೆ ಕೊರೋನದಂತಹ ಕಾಯಿಲೆಗೆ ಒಳಗಾಗುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಾಗ ಪುರಾವೆ ಅಪೇಕ್ಷಿಸುವುದು ಸರಿಯಲ್ಲ ಎಂದ ಹೈಕೋರ್ಟ್, ಆಸ್ಪತ್ರೆಯವರು ಪಡೆದಿರುವ 10 ಲಕ್ಷ ರೂ. ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡುವಂತೆ ಸೂಚಿಸಿದೆ.