​ದೇಶದಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಕೊರೋನ ಪ್ರಕರಣ ಪತ್ತೆ

Update: 2020-06-28 03:42 GMT

ಹೊಸದಿಲ್ಲಿ: ದೇಶದಲ್ಲಿ ಶನಿವಾರ ಒಂದೇ ದಿನ 20 ಸಾವಿರಕ್ಕೂ ಅಧಿಕ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 16 ಸಾವಿರದ ಗಡಿ ದಾಟಿದೆ.

ದೇಶದಲ್ಲಿ ಶುಕ್ರವಾರ 18 ಸಾವಿರ ಕೋವಿಡ್-19 ಸೋಂಕು ಪ್ರಕರಣ ದೃಢಪಟ್ಟಿತ್ತು. ಶನಿವಾರ 2060 ಹೆಚ್ಚು ಹೊಸ ಪ್ರಕರಣಗಳು ಕಾಣಿಸಿಕೊಂಡಿದೆ. ದೇಶದಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲು.

ಮಹಾರಾಷ್ಟ್ರದಲ್ಲಿ ಕೊರೋನ ಅಬ್ಬರ ಹೊಸ ಎತ್ತರಕ್ಕೇರಿದ್ದು, 6368 ಪ್ರಕರಣಗಳು ಒಂದೇ ದಿನ ವರದಿಯಾಗಿವೆ. ಮುಂಬೈನಲ್ಲಿ 2 ಸಾವಿರಕ್ಕೂ ಅಧಿಕ ಸೋಂಕಿತರು ಸೇರ್ಪಡೆಯಾಗಿದ್ದಾರೆ. ಒಂಬತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿನದ ಗರಿಷ್ಠ ಪ್ರಕರಣಗಳು ಶನಿವಾರ ದಾಖಲಾಗಿವೆ.

ತಮಿಳುನಾಡು (3713), ತೆಲಂಗಾಣ (1087), ಕರ್ನಾಟಕ (918), ಆಂಧ್ರಪ್ರದೇಶ (796), ಗುಜರಾತ್ (615), ಬಿಹಾರ (301), ಕೇರಳ (195), ಗೋವಾ (89), ಪುದುಚೇರಿ (87)ಯಲ್ಲಿ ಒಂದೇ ದಿನ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ದೆಹಲಿಯಲ್ಲಿ 2948, ಉತ್ತರ ಪ್ರದೇಶದಲ್ಲಿ 607, ಹರ್ಯಾಣದಲ್ಲಿ 543, ಬಂಗಾಳದಲ್ಲಿ 521 ಪ್ರಕರಣಗಳು ವರದಿಯಾಗಿವೆ.

ಶನಿವಾರ 414 ಮಂದಿ ಸೋಂಕಿತರು ಮೃತಪಟ್ಟಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 16095ಕ್ಕೇರಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,29,533ಕ್ಕೇರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿದೆ. ಗುಣಮುಖರಾದವರ ಸಂಖ್ಯೆ 3.1 ಲಕ್ಷವಾಗಿದೆ ಎನ್ನುವುದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿ ಬಳಿಕ ಒಂದೇ ದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾದ ನಾಲ್ಕನೇ ರಾಜ್ಯವಾಗಿ ತೆಲಂಗಾಣ ಸೇರ್ಪಡೆಯಾಗಿದೆ. ರಾಜ್ಯದಲ್ಲಿ ಶನಿವಾರ 1087 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 13436ಕ್ಕೇರಿದೆ. ರಾಜ್ಯದಲ್ಲಿ 243 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 596 ಪ್ರಕರಣಗಳು ಸೇರಿದಂತೆ ಕರ್ನಾಟಕದಲ್ಲಿ ಒಂದೇ ದಿನ 918 ಪ್ರಕರಣಗಳು ದೃಢಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News