×
Ad

“ಮಧ್ಯರಾತ್ರಿ ಪೊಲೀಸರಿಗೆ ಕರೆ ಮಾಡಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸುವಂತೆ ಹೇಳುತ್ತೇನೆ”

Update: 2020-06-28 14:31 IST

ಭೋಪಾಲ್: ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಿಸುವಂತೆ ಪಕ್ಷದ ಕಾರ್ಯಕರ್ತರು ಮಾಡಿಕೊಂಡ ಮನವಿಗೆ ನಾನು ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಹೇಳುವ ಮೂಲಕ ಹಿರಿಯ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯಾ ವಿವಾದ ಸೃಷ್ಟಿಸಿದ್ದಾರೆ.

ಮಧ್ಯಪ್ರದೇಶದ ಮಂಡಸಾರ್ ಜಿಲ್ಲೆಯಲ್ಲಿ ಅವರು ನೀಡಿದ ಈ ಹೇಳಿಕೆಯನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ.

“ನಾನು ಕೊಲ್ಕತ್ತದಲ್ಲಿದ್ದಾಗಲೂ ಮಧ್ಯರಾತ್ರಿ 2 ಗಂಟೆಗೆ ನನಗೆ ಕರೆ ಬರುತ್ತದೆ. ಇಸ್ಪೀಟ್ ಆಡುವಾಗ ಪೊಲೀಸರು ಬಂಧಿಸಿದ್ದಾಗಿ ಕೆಲವರು ಹೇಳುತ್ತಾರೆ. ಪಕ್ಷದ ಕಾರ್ಯಕರ್ತರು ನಮಗೆ ಮುಖ್ಯ. ನಮ್ಮ ಕಾರ್ಯಕರ್ತರ ಕಾರಣಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನಾನು ಕರೆ ಮಾಡಿ ಬಿಡುಗಡೆಗೆ ಮನವಿ ಮಾಡುತ್ತೇನೆ” ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ವಿಜಯ್‍ ವರ್ಗಿಯಾ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ, “ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿಯ ತುಣುಕು ಇದು”ಎಂದು ಅಣಕವಾಡಿದ್ದಾರೆ.

“ಮೋದಿ- ಶಾ ನೇತೃತ್ವದ ಬಿಜೆಪಿಯ ದೃಷ್ಟಿ, ಇಸ್ಪೀಟ್ ಆಡುವಾಗ ಸಿಕ್ಕಿಹಾಕಿಕೊಂಡ ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಪೊಲೀಸರ ಮೇಲೆ ಮಧ್ಯರಾತ್ರಿ 2 ಗಂಟೆಗೆ ಒತ್ತಡ ತರುವುದು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿಜಯ್‍ ವರ್ಗಿಯಾ ಅವರು ಮಧ್ಯಪ್ರದೇಶದ ಹಿರಿಯ ಬಿಜೆಪಿ ಮುಖಂಡರಾಗಿದ್ದು, ಪಶ್ಚಿಮ ಬಂಗಾಳದ ಉಸ್ತುವಾರಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News