ರಶ್ಯದ ಬೇಹುಗಾರಿಕಾ ವಿಮಾನಗಳನ್ನು ತಡೆದ ಅಮೆರಿಕದ ಯುದ್ಧ ವಿಮಾನಗಳು

Update: 2020-06-28 17:05 GMT

ವಾಶಿಂಗ್ಟನ್, ಜೂ. 28: ಅಮೆರಿಕದ ಅಲಾಸ್ಕ ರಾಜ್ಯದ ಸಮೀಪಕ್ಕೆ ಶನಿವಾರ ಬಂದ ರಶ್ಯದ ನಾಲ್ಕು ಬೇಹುಗಾರಿಕಾ ವಿಮಾನಗಳನ್ನು ಅಮೆರಿಕದ ಯುದ್ಧವಿಮಾನಗಳು ತಡೆದಿವೆ ಎಂದು ಅಮೆರಿಕದ ಸೇನಾಧಿಕಾರಿಗಳು ತಿಳಿಸಿದ್ದಾರೆ.

ರಶ್ಯದ ಟಿಯು-142 ವಿಮಾನಗಳು ಅಲಾಸ್ಕ ರಾಜ್ಯದ ದಕ್ಷಿಣ ಭಾಗದ ಅಲೇಶಿಯನ್ ದ್ವೀಪ ಸಮೂಹ 65 ನಾಟಿಕಲ್ ಮೈಲಿ ವ್ಯಾಪ್ತಿಗೆ ಬಂದು ಅಲಸ್ಕನ್ ಏರ್ ಡಿಫೆನ್ಸ್ ಐಡೆಂಟಿಫಿಕೇಶನ್ ರೆನ್ (ಎಡಿಐಝಡ್)ನಲ್ಲಿ 8 ಗಂಟೆಗಳ ಕಾಲ ಅಲೆದಾಡಿದವು.

ಆದರೆ ಅವುಗಳು ಅಂತರ್‌ರಾಷ್ಟ್ರೀಯ ವಾಯುಪ್ರದೇಶದಲ್ಲೇ ನಿಂತವು, ಅಮೆರಿಕ ಅಥವಾ ಕೆನಡದ ವಾಯುಪ್ರದೇಶಕ್ಕೆ ಪ್ರವೇಶಿಸಲಿಲ್ಲ ಎಂದು ನಾರ್ತ್ ಅಮೆರಿಕನ್ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (ಎನ್‌ಒಆರ್‌ಎಡಿ) ಟ್ವಿಟರ್‌ನಲ್ಲಿ ತಿಳಿಸಿದೆ.

ಅಲಾಸ್ಕದ ಸಮೀಪ ರಶ್ಯದ ವಿಮಾನಗಳನ್ನು ಅಮೆರಿಕದ ವಿಮಾನಗಳು ತಡೆಹಿಡಿದಿರುವುದು ಈ ತಿಂಗಳಲ್ಲಿ ಇದು ನಾಲ್ಕನೇ ಬಾರಿಯಾಗಿದೆ.

ರಶ್ಯದ ಸಮೀಪ ಬಾಲ್ಟಿಕ್ ಮತ್ತು ಕಪ್ಪು ಸಮುದ್ರಗಳ ಮೇಲೆ ಅಮೆರಿಕದ ಎರಡು ಬಿ-1 ಬಾಂಬರ್ ವಿಮಾನಗಳು ಹಾರಾಟ ನಡೆಸಿದ ಬಳಿಕ ಅವುಗಳನ್ನು ರಶ್ಯದ ವಿಮಾನಗಳು ತಡೆದಿರುವ ಚಿತ್ರಗಳನ್ನು ಮೇ 29ರಂದು ರಶ್ಯದ ರಕ್ಷಣಾ ಸಚಿವಾಲಯ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News