ಎನ್ ಡಿಎ ಕಿತ್ತೊಗೆಯಲು ಹೊಸ ಮೈತ್ರಿಕೂಟ ಸ್ಥಾಪಿಸಿ ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ: ಯಶವಂತ್ ಸಿನ್ಹ

Update: 2020-06-28 18:25 GMT

ಪಾಟ್ನ, ಜೂ.28: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಸರಕಾರವನ್ನು ಕಿತ್ತೊಗೆಯಲ ಹೊಸ ರಾಜಕೀಯ ರಂಗವನ್ನು ಸ್ಥಾಪಿಸುವುದಾಗಿ ಮಾಜಿ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಶನಿವಾರ ಹೇಳಿದ್ದು, ಇದರೊಂದಿಗೆ ಪಕ್ಷ ರಾಜಕೀಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.

ಸಿನ್ಹಾ ರಾಜಕೀಯ ಸನ್ಯಾಸ ಪಡೆದು ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ಕೆಲಸ ಮಾಡುವುದಾಗಿ ಎರಡು ವರ್ಷದ ಹಿಂದೆ ಘೋಷಿಸಿ ರಾಷ್ಟ್ರಮಂಚ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಶನಿವಾರ ನಡೆದ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಸ್ಥಾಪನೆಯ ನಿರ್ಧಾರ ಪ್ರಕಟಿಸಿದರು ಹಾಗೂ ಪಕ್ಷಕ್ಕೆ ಸೇರಬಯಸುವ ಎಲ್ಲರಿಗೂ ಸ್ವಾಗತವಿದೆ ಎಂದು ಹೇಳಿದ್ದಾರೆ.

ತಮ್ಮ ಪಕ್ಷದ ಹೆಸರನ್ನು ಇನ್ನೂ ನಿರ್ಧರಿಸಿಲ್ಲ. ಬಿಹಾರ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ. ತಾನು ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಉತ್ತಮ ಬಿಹಾರ ಸ್ಥಾಪನೆಗೆ ನಮ್ಮ ಮೈತ್ರಿಕೂಟ ಶಕ್ತಿಮೀರಿ ಹೋರಾಡಲಿದೆ. ಬಿಹಾರದ ಹಲವು ಮುಖಂಡರು ಈ ವಿಷಯದಲ್ಲಿ ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಸಿನ್ಹಾ ಹೇಳಿದರು.

ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದರೂ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರಕಾರ ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ವಿಫಲವಾಗಿದೆ. ಬೆಹ್ತರ್ ಬಿಹಾರ್ ಬನಾವೊ(ಬಿಹಾರವನ್ನು ಅಭಿವೃದ್ಧಿಗೊಳಿಸಿ) ಎಂಬ ಧ್ಯೇಯವಾಕ್ಯದಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಎನ್‌ಡಿಎ ಸರಕಾರವನ್ನು ಕಿತ್ತೊಗೆಯುವುದು ಬಿಹಾರದ ಅಭಿವೃದ್ಧಿಯ ದಿಕ್ಕಿನಲ್ಲಿ ಇರಿಸುವ ಮೊದಲ ಹೆಜ್ಜೆಯಾಗಿದೆ ಎಂದವರು ಹೇಳಿದರು.

ಕಳೆದ 27 ವರ್ಷಗಳಿಂದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬಿಹಾರ ಕಡೆಯ ಸ್ಥಾನದಲ್ಲಿದೆ. ಜನತೆಗೆ ಆರೋಗ್ಯ ಸೌಲಭ್ಯ ನೀಡುವ ವಿಷಯದಲ್ಲೂ ಬಿಹಾರ ಕಡೆಯ ಸ್ಥಾನದಲ್ಲಿದ್ದು ರಾಜ್ಯದ ರೈತರು ದೇಶದಲ್ಲೇ ಅತ್ಯಂತ ಬಡವರಾಗಿದ್ದಾರೆ. ದೇಶದ ಕೈಗಾರಿಕೆಗಳಲ್ಲಿ ರಾಜ್ಯದ ಪಾಲು ಕೇವಲ 1.5% ಆಗಿದೆ. ತಟ್ಟೆ ಬಡಿಯುವುದು ಅಥವಾ ಚಪ್ಪಾಳೆ ಬಡಿಯುವುದರ ಬದಲು, ರಾಜ್ಯದ ಸ್ಥಿತಿಗತಿ ಹಾಗೂ ಜನತೆಯ ದೈನಂದಿನ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತೀ ವಾರ ಮಾಧ್ಯಮಕ್ಕೆ ವಿವರಿಸುತ್ತೇವೆ ಎಂದು ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News