ದೇಶದಲ್ಲಿ ಆರೇ ದಿನದಲ್ಲಿ 1.1 ಲಕ್ಷ ಕೊರೋನ ಪ್ರಕರಣ

Update: 2020-06-29 03:37 GMT

ಹೊಸದಿಲ್ಲಿ : ಭಾರತದಲ್ಲಿ ಕಳೆದ ಆರು ದಿನಗಳಲ್ಲಿ 1.1 ಲಕ್ಷ ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ರವಿವಾರ ದೇಶದಲ್ಲಿ 19,700 ಪ್ರಕರಣಗಳು ವರದಿಯಾಗಿದ್ದು, ಶನಿವಾರ ದಾಖಲಾದ 20,600 ಪ್ರಕರಣಗಳಿಗೆ ಹೋಲಿಸಿದರೆ ಇದು ತುಸು ಕಡಿಮೆ.

ರವಿವಾರ 384 ಮಂದಿ ಸೋಂಕಿತರು ಮೃತಪಟ್ಟಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 16,468ಕ್ಕೇರಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,49,106. ಅಂತೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 2.1 ಲಕ್ಷಕ್ಕೇರಿದ್ದು, 3.2 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಹಾಗೂ ತೆಲಂಗಾಣ ಹೊರತುಪಡಿಸಿ ಒಂದೇ ದಿನ 1000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದ ಐದನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ರವಿವಾರ ಬೆಂಗಳೂರಿನಲ್ಲಿ 783 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 1267 ಪ್ರಕರಣಗಳು ದೃಢಪಟ್ಟಿವೆ.

ತಮಿಳುನಾಡಿನಲ್ಲೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, ರವಿವಾರ 3940 ಹೊಸ ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣದ ಆರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿನವೊಂದರ ಗರಿಷ್ಠ ಪ್ರಕರಣಗಳು ರವಿವಾರ ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ 5,493 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, 156 ಮಂದಿ ಸೋಂಕಿತರು ರವಿವಾರ ಜೀವ ಕಳೆದುಕೊಂಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 7428ಕ್ಕೇರಿದೆ. ದೇಶದ ಒಟ್ಟು ಪ್ರಕರಣಗಳ ಪೈಕಿ 30% ಪ್ರಕರಣಗಳು ಅಂದರೆ 1,64,626 ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿವೆ. ಆಂಧ್ರಪ್ರದೇಶ (813), ಗುಜರಾತ್ (624), ಬಂಗಾಳ (572) ರವಿವಾರ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News