ಲಡಾಖ್‌ನಲ್ಲಿ ಭಾರತೀಯ ವಿಮಾನ ಹಾರಾಟ: ಸುಳ್ಳು ಪೋಸ್ಟ್ ಮಾಡಿದ ನಿವೃತ್ತ ಮೇಜರ್ ಜನರಲ್‌

Update: 2020-06-29 04:41 GMT

ಹೊಸದಿಲ್ಲಿ : ಅಮೆರಿಕದ ಸರೋವರವೊಂದರ ಮೇಲೆ ಹಾರಾಟ ಮಾಡುತ್ತಿರುವ ಅಪಾಚೆ ಹೆಲಿಕಾಪ್ಟರನ್ನು ಲಡಾಖ್‌ನ ಪಾಂಗಾಂಗ್ ತ್ಸೋ ಸರೋವರದ ಮೇಲೆ ಹಾರಾಡುತ್ತಿರುವ ಭಾರತೀಯ ಸೇನಾ ಹೆಲಿಕಾಪ್ಟರ್ ಎಂದು ಸುಳ್ಳು ಸುದ್ದಿ ಪೋಸ್ಟ್ ಮಾಡಿದ ನಿವೃತ್ತ ಮೇಜರ್ ಜನರಲ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ ಆಗಿದೆ.

ಇದು ಸುಳ್ಳು ವೀಡಿಯೊ. ಸುಳ್ಳು ಸುದ್ದಿ ಹರಡುತ್ತಿದ್ದೀರಿ ಎಂದು ಟ್ವಿಟರ್‌ನಲ್ಲಿ ಹಲವು ಮಂದಿ ಪುರಾವೆ ಸಹಿತ ಹೇಳಿದರೂ, ನಿವೃತ್ತ ಮೇಜರ್ ಜನರಲ್ ಎಂದು ಹೇಳಿಕೊಂಡ ಈ ವ್ಯಕ್ತಿ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಮೇಜರ್ ಜನರಲ್ ಆಗಿದ್ದರು ಎಂದು ಹೇಳಲಾದ ವ್ಯಕ್ತಿ ಈ ರೀತಿ ಸುಳ್ಳು ಸುದ್ದಿಗಳನ್ನು ಸಮರ್ಥಿಸಿಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಮೇಜರ್ ಜನರಲ್ ಹುದ್ದೆಯು ಭಾರತೀಯ ಸೇನೆಯ ಮುಖ್ಯಸ್ಥ ಹುದ್ದೆಗಿಂತ ಎರಡು ಹುದ್ದೆ ಕೆಳಗಿನದು.

ವೀಡಿಯೊ ಶೇರ್ ಮಾಡಿದ ಮೇಜರ್ ಜನರಲ್ ಬ್ರಿಜೇಶ್ ಕೆ.ಆರ್. ಎಂಬ ಟ್ವಟರ್ ಬಳಕೆದಾರ, ಸೂಪರ್... ನಮ್ಮ ಅಪಾಚೆ ದಾಳಿ ಹೆಲಿಕಾಪ್ಟರ್ ‌ಗಳು ಲಡಾಖ್‌ನ ಪಾಂಗಾಂಗ್ ತ್ಸೋ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ. ಶ್ಲಾಘನೀಯ ಎಂದು ಒಕ್ಕಣೆ ನೀಡಿದ್ದರು. ವೀಡಿಯೊದಲ್ಲಿ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಬೆಟ್ಟಪ್ರದೇಶದ ಕೆಳಮಟ್ಟದಲ್ಲಿ ಸರೋವರವೊಂದರ ಮೇಲೆ ಹಾರಾಡುತ್ತಿರುವ ಚಿತ್ರಣವಿದೆ. ಈ ವೀಡಿಯೊ ಪೋಸ್ಟ್ ಮಾಡಿದ ತಕ್ಷಣ ಹಲವು ಮಂದಿ ಟ್ವಿಟರಿಗರು ಇದು ಅಮೆರಿಕದ ಸರೋವರ ಎಂದು ಪತ್ತೆ ಮಾಡಿದ್ದಾರೆ.

ಆಶೀಶ್ ಸಿಂಗ್ ಎಂಬ ಬಳಕೆದಾರರೊಬ್ಬರು ಇದು ಹವಾಸು ಸರೋವರದ ದೃಶ್ಯ ಎಂದು ಪ್ರತಿಪಾದಿಸಿದ ಅವರು ಅರಿಝೋನಾ ಸರೋವರದ ಮೇಲೆ ಅಮೆರಿಕನ್ ಅಪಾಚೆ ಹೆಲಿಕಾಪ್ಟರ್ ಹಾರಾಡುತ್ತಿರುವ ಇಂಥದ್ದೇ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಪ್ರಶ್ನಾರ್ಹ ವೀಡಿಯೊವನ್ನು 2018ರಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಇದನ್ನು ತಪ್ಪಾಗಿ ಪೋಸ್ಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇದನ್ನು ಫೀಲ್ ಗುಡ್ ಫ್ಯಾಕ್ಟರ್ ಮತ್ತು ಎ ಫೋರ್ಸ್ ಮಲ್ಟಿಪ್ಲಯರ್ ಎಂದು ಸಮರ್ಥಿಸಿಕೊಂಡಿದ್ದಾರೆ. ಹಲವು ಮಂದಿ ಇವರು ಮೇಜರ್ ಜನರಲ್ ಆಗಿದ್ದರು ಎಂಬ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News