ಟ್ರಂಪ್ ವಿರುದ್ಧ ಬಂಧನಾದೇಶ ಹೊರಡಿಸಿದ ಇರಾನ್

Update: 2020-06-29 16:09 GMT

ಇರಾನ್‌ನ ಉನ್ನತ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹತ್ಯೆಗೆ ಸಂಬಂಧಿಸಿ ಆ ದೇಶವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ 35 ಮಂದಿಯ ವಿರುದ್ಧ ಬಂಧನಾದೇಶವನ್ನು ಹೊರಡಿಸಿದೆ ಹಾಗೂ ಅವರನ್ನು ಬಂಧಿಸುವಲ್ಲಿ ನೆರವು ನೀಡುವಂತೆ ಇಂಟರ್‌ಪೋಲ್‌ಗೆ ಮನವಿ ಮಾಡಿದೆ ಎಂದು ಟೆಹರಾನ್ ಪ್ರಾಸಿಕ್ಯೂಟರ್ ಅಲಿ ಅಲ್‌ಖಾಸಿಮೆಹರ್ ಸೋಮವಾರ ಹೇಳಿದ್ದಾರೆ ಎಂದು ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೆರಿಕವು ಇರಾಕ್‌ನಲ್ಲಿ ಜನವರಿ 3ರಂದು ಡ್ರೋನ್ ದಾಳಿಯ ಮೂಲಕ ಇರಾನ್‌ನ ರೆವಲೂಶನರಿ ಗಾರ್ಡ್ಸ್‌ಗೆ ಸೇರಿದ ಖುದ್ಸ್ ಫೋರ್ಸ್‌ನ ನಾಯಕ ಸುಲೈಮಾನಿಯವರನ್ನು ಕೊಂದಿತ್ತು. ವಲಯದಲ್ಲಿರುವ ಅಮೆರಿಕದ ಸೈನಿಕರ ಮೇಲೆ ಇರಾನ್ ಜೊತೆ ನಂಟು ಹೊಂದಿರುವ ಶಸ್ತ್ರಾಸ್ತ್ರ ಗುಂಪುಗಳು ದಾಳಿ ನಡೆಸುವಂತೆ ಸುಲೈಮಾನಿ ವ್ಯವಸ್ಥೆ ಮಾಡಿದ್ದರು ಎಂದು ಅಮೆರಿಕ ಆರೋಪಿಸಿದೆ.

ಟ್ರಂಪ್ ಮತ್ತು ಇತರರ ವಿರುದ್ಧ ಕೊಲೆ ಮತ್ತು ಭಯೋತ್ಪಾದನೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಲ್‌ಖಾಸಿಮೆಹರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News