ಕೊರೋನ ವೈರಸ್: ದಿಲ್ಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ

Update: 2020-06-29 16:17 GMT

ಹೊಸದಿಲ್ಲಿ, ಜೂ.29: ಗಂಭೀರ ಸ್ಥಿತಿಯಲ್ಲಿರುವ ಕೊರೋನ ವೈರಸ್ ರೋಗಿಗಳ ಚಿಕಿತ್ಸೆಗೆ ನೆರವಾಗಲು ತನ್ನ ಸರಕಾರವು ದಿಲ್ಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್‌ನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ತಿಳಿಸಿದರು.

ಕೊರೋನ ವೈರಸ್ ಸೋಂಕಿನ ಗಂಭೀರ ಪ್ರಕರಣಗಳಲ್ಲಿ ಪ್ರಯೋಗಾತ್ಮಕ ಚಿಕಿತ್ಸೆಯಾಗಿರುವ ಪ್ಲಾಸ್ಮಾ ಥೆರಪಿಯಲ್ಲಿ ಸೋಂಕಿನಿಂದ ಚೇತರಿಸಿಕೊಂಡಿರುವ ವ್ಯಕ್ತಿಯ ರಕ್ತದ ಪ್ಲಾಸ್ಮಾವನ್ನು ರೋಗಿಗೆ ನೀಡಲಾಗುತ್ತದೆ. ಚೇತರಿಸಿಕೊಂಡ ವ್ಯಕ್ತಿಯ ಪ್ಲಾಸ್ಮಾದಲ್ಲಿರುವ ಆ್ಯಂಟಿಬಾಡಿಗಳು ಅಥವಾ ಪ್ರತಿಕಾಯಗಳು ಚಿಕಿತ್ಸೆ ಅಗತ್ಯವಾಗಿರುವ ರೋಗಿಯ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ದಿಲ್ಲಿಯ ಮೊದಲ ಪ್ಲಾಸ್ಮಾ ಬ್ಯಾಂಕ್ ಇನ್ನೆರಡು ದಿನಗಳಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬೈಲಿಯರಿ ಸೈನ್ಸಸ್(ಐಎಲ್‌ಬಿಎಸ್)ನಲ್ಲಿ ಕಾರ್ಯಾರಂಭಗೊಳ್ಳಲಿದೆ. ಕೊರೋನ ವೈರಸ್ ಚಿಕಿತ್ಸೆಗೆ ಪ್ಲಾಸ್ಮಾ ಪಡೆಯಲು ಜನರು ಪರದಾಡುತ್ತಿದ್ದಾರೆ. ದಿಲ್ಲಿಯಲ್ಲಿ ಸ್ಥಾಪಿಸಲಾಗುತ್ತಿರುವ ಪ್ಲಾಸ್ಮಾ ಬ್ಯಾಂಕ್ ಬಹುಶಃ ಭಾರತದಲ್ಲಿಯೇ ಮೊದಲನೆಯದಾಗಲಿದೆ. ನಗರದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಈ ಬ್ಯಾಂಕ್‌ನಿಂದ ಪ್ಲಾಸ್ಮಾವನ್ನು ಪಡೆದುಕೊಳ್ಳಬಹುದು. ಆದರೆ ಇದಕ್ಕೆ ವೈದ್ಯರ ಶಿಫಾರಸು ಅಗತ್ಯವಾಗಿರುತ್ತದೆ. ವೈದ್ಯರು ಐಎಲ್‌ಬಿಎಸ್ ಅನ್ನು ಸಂಪರ್ಕಿಸಿ ಪ್ಲಾಸ್ಮಾ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ತಮ್ಮ ಪ್ಲಾಸ್ಮಾ ದಾನ ಮಾಡುವಂತೆ ಮತ್ತು ಜೀವರಕ್ಷಣೆಗೆ ನೆರವಾಗುವಂತೆ ಚೇತರಿಸಿಕೊಂಡಿರುವ ರೋಗಿಗಳನ್ನು ಕೋರಿಕೊಂಡ ಕೇಜ್ರಿವಾಲ್, ಅವರು ಮತ್ತೊಮ್ಮೆ ಸೋಂಕಿಗೆ ಗುರಿಯಾಗಬಹುದು ಎಂದು ಭೀತಿ ಪಡಬೇಕಿಲ್ಲ. ಪ್ಲಾಸ್ಮಾ ದಾನ ಮಾಡುವವರಿಗಾಗಿ ಪ್ರಯಾಣ ವ್ಯವಸ್ಥೆ ಮತ್ತು ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News