ಜುಲೈ ಅಂತ್ಯಕ್ಕೆ ಭಾರತ ತಲುಪಲಿರುವ ರಫೇಲ್ ಯುದ್ಧವಿಮಾನಗಳು

Update: 2020-06-29 16:20 GMT

ಹೊಸದಿಲ್ಲಿ,ಜೂ.29: ಆಗಸದಿಂದ ಆಗಸಕ್ಕೆ ಚಿಮ್ಮುವ ಮೀಟಿಯೋರ್ ಕ್ಷಿಪಣಿಗಳು ಮತ್ತು ಸ್ಕಾಲ್ಪ್ ದಾಳಿ ಕ್ಷಿಪಣಿಗಳಿಂದ ಸಜ್ಜಿತ ನಾಲ್ಕರಿಂದ ಆರು ರಫೇಲ್ ಯುದ್ಧ ವಿಮಾನಗಳ ಮೊದಲ ತಂಡ ಜುಲೈ ಅಂತ್ಯದ ವೇಳೆಗೆ ಭಾರತವನ್ನು ತಲುಪಲಿದ್ದು, ಭಾರತೀಯ ವಾಯುಪಡೆಗೆ ಈ ವಿಮಾನಗಳು ಭೀಮಬಲವನ್ನು ನೀಡಲಿವೆ.

ಪೂರ್ವ ಲಡಾಖ್‌ ನಲ್ಲಿ ಚೀನಾದೊಂದಿಗೆ ಮಿಲಿಟರಿ ಬಿಕ್ಕಟ್ಟಿನ ನಡುವೆಯೇ ಭಾರತವು 36 ರಫೇಲ್ ವಿಮಾನಗಳ ಪೂರೈಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಫ್ರಾನ್ಸ್‌ಗೆ ಸೂಚಿಸಿತ್ತು. 59,000 ಕೋ.ರೂ. ವೆಚ್ಚದ ಈ ಖರೀದಿ ಒಪ್ಪಂದಕ್ಕೆ 2016,ಸೆಪ್ಟೆಂಬರ್‌ನಲ್ಲಿ ಅಂಕಿತ ಹಾಕಲಾಗಿತ್ತು.

  ಫ್ರಾನ್ಸ್ ‌ನಲ್ಲಿ ತರಬೇತಿಯನ್ನು ಪಡೆದಿರುವ ಭಾರತೀಯ ವಾಯುಪಡೆಯ ಪೈಲಟ್‌ ಗಳು ಮೊದಲ ನಾಲ್ಕರಿಂದ ಆರು ರಫೇಲ್‌ಗಳನ್ನು ಭಾರತಕ್ಕೆ ತರಲಿದ್ದು,ಅಬುಧಾಬಿ ಬಳಿಯ ಅಲ್ ಧಫ್ರಾ ವಾಯುನೆಲೆಯಲ್ಲಿ ಸಂಕ್ಷಿಪ್ತ ನಿಲುಗಡೆಯ ಬಳಿಕ ಜು.27 ರಂದು ಅಂಬಾಲಾ ವಾಯುನೆಲೆಗೆ ಬಂದಿಳಿಯುವ ಸಾಧ್ಯತೆಗಳಿವೆ ಎಂದು ಐಎಎಫ್ ಮೂಲಗಳು ತಿಳಿಸಿದವು. ಅಬುಧಾಬಿಯಿಂದ ಭಾರತಕ್ಕೆ ಬರುವ ಮಾರ್ಗದಲ್ಲಿ ಐಎಎಫ್‌ನ ಐಎಲ್-78 ಟ್ಯಾಂಕರ್ ವಿಮಾನದ ಮೂಲಕ ಮಧ್ಯ ಆಗಸದಲ್ಲಿ ರಫೇಲ್ ವಿಮಾನಗಳಿಗೆ ಇಂಧನ ಮರುಪೂರಣವಾಗುವ ಸಾಧ್ಯತೆಯಿದೆ.

120ರಿಂದ 150 ಕಿ.ಮೀ.ದಾಳಿ ವ್ಯಾಪ್ತಿಯನ್ನು ಹೊಂದಿರುವ ಮಿಟಿಯೋರ್ ಮತ್ತು 300 ಕಿ.ಮೀ.ವ್ಯಾಪ್ತಿಯ ಸ್ಕಾಲ್ಪ್ ಕ್ಷಿಪಣಿಗಳ ಪೂರೈಕೆ ಈಗಾಗಲೇ ಆರಂಭಗೊಂಡಿದೆ.

 ನಿಗದಿತ ಪೂರೈಕೆ ವೇಳಾಪಟ್ಟಿಯಂತೆ ಮೊದಲ ನಾಲ್ಕು ರಫೇಲ್‌ ಗಳು ಈ ವರ್ಷದ ಮೇ ತಿಂಗಳೊಳಗೆ ಅಂಬಾಲಾ ತಲುಪಬೇಕಿತ್ತು ಮತ್ತು ಎಲ್ಲ 36 ರಫೇಲ್ ಯುದ್ಧವಿಮಾನಗಳು 2022,ಎಪ್ರಿಲ್‌ನೊಳಗೆ ಪೂರೈಕೆಯಾಗಬೇಕಿತ್ತು. ಆದರೆ ಕೊರೋನ ವೈರಸ್ ಪಿಡುಗಿನಿಂದಾಗಿ ಮೊದಲ ತಂಡದ ಪೂರೈಕೆ ಕೊಂಚ ವಿಳಂಬವಾಗಿದ್ದರೂ,ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪರಿಗಣಿಸಿ ನಿಗದಿತ ಅವಧಿಗೆ ಮೊದಲೇ ಎಲ್ಲ ವಿಮಾನಗಳನ್ನು ಪೂರೈಸುವಂತೆ ಭಾರತವೀಗ ಫ್ರಾನ್ಸ್‌ಗೆ ಸೂಚಿಸಿದೆ.

 ರಫೇಲ್ ಯುದ್ಧವಿಮಾನಗಳು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಿ ವಾಯುಪಡೆಯ ವಿರುದ್ಧ ಐಎಎಫ್‌ಗೆ ಹೆಚ್ಚಿನ ಮೇಲುಗೈ ಅನ್ನು ಒದಗಿಸಲಿವೆ.

ಚೀನಾ ಯಾವುದೇ ದುಸ್ಸಾಹಸಕ್ಕೆ ಇಳಿಯದಂತಿರಲು ಐಎಫ್ ಈಗಾಗಲೇ ಎಲ್‌ಎಸಿಯಲ್ಲಿ ಸುಖೋಯ್-30 ಎಂಕೆ ಐ,ಮಿಗ್-29 ಮತ್ತು ಜಾಗ್ವಾರ್ ಯುದ್ಧವಿಮಾನಗಳನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News