ಹಿಂದು ಮಹಾಸಾಗರದಲ್ಲಿ ಚೀನಿ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಕಣ್ಗಾವಲು ಹೆಚ್ಚಿಸಿದ ಭಾರತ

Update: 2020-06-29 16:27 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.29: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳಲ್ಲಿ ಭಾರತೀಯ ನೌಕಾಪಡೆಯು ಹಿಂದು ಮಹಾಸಾಗರ ಪ್ರದೇಶದಲ್ಲಿ ತನ್ನ ಕಣ್ಗಾವಲನ್ನು ಮತ್ತು ಕಾರ್ಯಸಿದ್ಧ ನಿಯೋಜನೆಗಳನ್ನು ಹೆಚ್ಚಿಸಿದೆ.

ಪ್ರಾದೇಶಿಕ ಭದ್ರತೆಯ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಅಮೆರಿಕ ಮತ್ತು ಜಪಾನ್‌ ನಂತಹ ವಿವಿಧ ರಾಷ್ಟ್ರಗಳ ನೌಕಾಪಡೆಗಳೊಂದಿಗಿನ ತನ್ನ ಕಾರ್ಯಾಚರಣೆ ಸಹಕಾರವನ್ನೂ ಹೆಚ್ಚಿಸಿಕೊಳ್ಳುತ್ತಿದೆ ಎಂದು ಬೆಳವಣಿಗೆಗಳನ್ನು ಬಲ್ಲ ಮೂಲಗಳು ತಿಳಿಸಿವೆ.

ಚೀನಿ ನೌಕಾಪಡೆಯ ಹಡಗುಗಳು ಮತ್ತು ಜಲಾಂತರ್ಗಾಮಿಗಳು ಆಗಾಗ್ಗೆ ಸಂಚರಿಸುತ್ತಿರುವ ಹಿಂದು ಮಹಾಸಾಗರ ಪ್ರದೇಶದಲ್ಲಿ ಶನಿವಾರ ಭಾರತ ಮತ್ತು ಜಪಾನ್ ನೌಕಾಪಡೆಗಳು ಸಮರಾಭ್ಯಾಸವನ್ನು ನಡೆಸಿದ್ದವು. ಭಾರತೀಯ ನೌಕಾಪಡೆಯ ಐಎನ್‌ಎಸ್ ರಾಣಾ ಮತ್ತು ಐಎನ್ ಎಸ್ ಕಲಿಷ್ ಹಾಗೂ ಜಪಾನಿನ ಜೆಎಸ್ ಕಶಿಮಾ ಮತ್ತು ಜೆಎಸ್ ಶಿಮಯುಕಿ ಹಡಗುಗಳು ಈ ಅಭ್ಯಾಸದಲ್ಲಿ ಭಾಗಿಯಾಗಿದ್ದವು.

ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಿ ನೌಕಾಪಡೆಯ ಆಕ್ರಮಣಕಾರಿ ನಿಲುವುಗಳ ಮಧ್ಯೆ ನಡೆದಿರುವ ಭಾರತ ಮತ್ತು ಜಪಾನ ನೌಕಾಪಡೆಗಳ ಈ ಜಂಟಿ ಅಭ್ಯಾಸ ಮಹತ್ವವನ್ನು ಪಡೆದುಕೊಂಡಿದೆ.

ಉಭಯ ನೌಕಾಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು ಈ ಅಭ್ಯಾಸದ ಉದ್ದೇಶವಾಗಿತ್ತು ಎಂದು ಮೂಲಗಳು ಹೇಳಿವೆ.

ಸಂಪನ್ಮೂಲ ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಮಿಲಿಟರಿ ಪ್ರಭಾವವನ್ನು ವಿಸ್ತರಿಸಲು ಚೀನಾ ಪ್ರಯತ್ನಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ,ಭಾರತ,ಆಸ್ಟ್ರೇಲಿಯಾ,ಜಪಾನ ಮತ್ತು ಫ್ರಾನ್ಸ್ ದೇಶಗಳ ನೌಕಾಪಡೆಗಳು ಈ ಪ್ರದೇಶದಲ್ಲಿ ತಮ್ಮ ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News