ಇನ್ನು ಟ್ರಂಪ್ ಅಣ್ಣನ ಮಗಳಿಂದ ಪುಸ್ತಕ!

Update: 2020-06-29 16:41 GMT

ವಾಶಿಂಗ್ಟನ್, ಜೂ. 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಪುಸ್ತಕಗಳನ್ನು ಬರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಬರೆದ ಪುಸ್ತಕ ‘ದ ರೂಮ್ ವೇರ್ ಇಟ್ ಹ್ಯಾಪನ್ಡ್: ಅ ವೈಟ್ ಹೌಸ್ ಮೆಮಾಯಿರ್’ ಭಾರೀ ಸದ್ದು ಮಾಡಿದರೆ, ಈಗ ಟ್ರಂಪ್‌ರ ಅಣ್ಣನ ಮಗಳು ಮೇರಿ ಎಲ್. ಟ್ರಂಪ್ ತನ್ನ ಚಿಕ್ಕಪ್ಪ ಡೊನಾಲ್ಡ್ ಟ್ರಂಪ್ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದಾರೆ.

‘ಟೂ ಮಚ್ ಆ್ಯಂಡ್ ನೆವರ್ ಇನಫ್: ಹೌ ಮೈ ಪ್ಯಾಮಿಲಿ ಕ್ರಿಯೇಟಡ್‌ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ ಎಂಬ ತಲೆಬರಹದ ಪುಸ್ತಕವು ಮುಂದಿನ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿದೆ.

 ತನ್ನ ತಂದೆ ಫ್ರೆಡ್ ಜೂನಿಯರ್ ತನ್ನ ಸಹೋದರರಾದ ಡೊನಾಲ್ಡ್ ಟ್ರಂಪ್ ಮತ್ತು ರಾಬರ್ಟ್ ಟ್ರಂಪ್ ಜೊತೆಗೆ ಹೊಂದಿದ್ದ ವೈರತ್ವ, ಅವರ ನಡುವಿನ ವ್ಯವಹಾರ ಹಾಗೂ ತನ್ನ ತಂದೆ ಕುಡಿತದ ದಾಸರಾಗಿ ಹೇಗೆ ದುರಂತದ ಸಾವನ್ನು ಕಂಡರು ಎಂಬ ಬಗ್ಗೆ ತನ್ನ ಪುಸ್ತಕದಲ್ಲಿ ಮೇರಿ ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ ಎಂದು ಭಾವಿಸಲಾಗಿದೆ.

ಅದೂ ಅಲ್ಲದೆ, ತನಗೆ ಬರಬೇಕಾಗಿದ್ದ ಪಿತ್ರಾರ್ಜಿತ ಆಸ್ತಿಗಾಗಿ ಚಿಕ್ಕಪ್ಪಂದಿರು ತನ್ನನ್ನು ಹೇಗೆ ಸತಾಯಿಸಿದರು ಹಾಗೂ ಅಂತಿಮವಾಗಿ ಆಸ್ತಿ ವ್ಯಾಜ್ಯವು ಹೇಗೆ ನ್ಯಾಯಾಲಯಕ್ಕೆ ಹೋಯಿತು ಹಾಗೂ ಅವರು ತನ್ನನ್ನು ಹೇಗೆ ಅವಮಾನಿಸಿದರು ಎಂಬ ಬಗ್ಗೆಯೂ 55 ವರ್ಷದ ಮೇರಿ ಬರೆದಿದ್ದಾರೆನ್ನಲಾಗಿದೆ.

ಫ್ರೆಡ್ ಜೂನಿಯರ್ ಫ್ರೆಡ್ ಸೀನಿಯರ್‌ರ ಹಿರಿಯ ಮಗನಾಗಿದ್ದರು. ಫ್ರೆಡ್ ಜೂನಿಯರ್ ನಂತರ ಹುಟ್ಟಿದವರು ಡೊನಾಲ್ಡ್ ಟ್ರಂಪ್ ಮತ್ತು ರಾಬರ್ಟ್ ಟ್ರಂಪ್. ಫ್ರೆಡ್ ಜೂನಿಯರ್ ಅತಿ ಕುಡಿತದ ಕಾರಣದಿಂದಾಗಿ ಮೃತಪಟ್ಟಾಗ ಮೇರಿಗೆ 16 ವರ್ಷ ವಯಸ್ಸು.

ಅದೇ ವೇಳೆ, ಪುಸ್ತಕದ ಪ್ರಕಟನೆಗೆ ತಡೆ ತರಲು ಟ್ರಂಪ್ ಕುಟುಂಬ ಪ್ರಯತ್ನಿಸುತ್ತಿದೆ. ಈ ಪುಸ್ತಕವು ಗೌಪ್ಯ ಕಾಪಾಡಿಕೊಳ್ಳಬೇಕೆಂದು ಮೇರಿ ಜೊತೆಗೆ ಮಾಡಿಕೊಳ್ಳಲಾದ ಒಪ್ಪಂದಕ್ಕೆ ವಿರುದ್ಧವಾಗಿದೆ, ಹಾಗಾಗಿ ಪುಸ್ತಕದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಟ್ರಂಪ್ ಸಹೋದರರು ನ್ಯಾಯಾಲಯಕ್ಕೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News