ಪಾಕ್ ಪೈಲಟ್‌ಗಳನ್ನು ಹೊರಗಿಟ್ಟ ವಿಮಾನಯಾನ ಕಂಪೆನಿಗಳು

Update: 2020-06-29 16:39 GMT

ಇಸ್ಲಾಮಾಬಾದ್, ಜೂ. 29: ಖತರ್ ಏರ್‌ವೇಸ್ ಸೇರಿದಂತೆ ಹಲವಾರು ಅಂತರ್‌ರಾಷ್ಟ್ರೀಯ ವಾಯುಯಾನ ಕಂಪೆನಿಗಳು ತಮ್ಮ ಪಾಕಿಸ್ತಾನಿ ಉದ್ಯೋಗಿಗಳ ವಿರುದ್ಧ ತನಿಖೆ ಆರಂಭಿಸಿವೆ ಹಾಗೂ ಮುಂದಿನ ಸೂಚನೆಯವರೆಗೆ ಅವರನ್ನು ಹಾರಾಟ ಜವಾಬ್ದಾರಿಯಿಂದ ಹೊರಗಿಟ್ಟಿವೆ. ತನ್ನ 262 ಪೈಲಟ್‌ಗಳು ನಕಲಿ ಪರವಾನಿಗೆಗಳನ್ನು ಹೊಂದಿದ್ದಾರೆ ಎಂಬುದಾಗಿ ಪಾಕಿಸ್ತಾನದ ವಿಮಾನಯಾನ ಕಂಪೆನಿ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ಕಳೆದ ವಾರ ಹೇಳಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಕಳೆದ ವಾರ ‘ಸಂಶಯಾಸ್ಪದ ಪರವಾನಿಗೆ’ಗಳನ್ನು ಹೊಂದಿದ 150 ಪೈಲಟ್‌ಗಳನ್ನು ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಸೇವೆಯಿಂದ ಹೊರಗಿಟ್ಟಿತ್ತು. ಮೇ 22ರಂದು ಕರಾಚಿಯಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಪೈಲಟ್‌ಗಳು ಮತ್ತು ವಾಯ ಸಂಚಾರ ನಿಯಂತ್ರಣ ಕಾರಣ ಎಂಬುದಾಗಿ ಪ್ರಾಥಮಿಕ ತನಿಖಾ ವರದಿ ಹೇಳಿದ ಬಳಿಕ ಅದು ಈ ಕ್ರಮ ತೆಗೆದುಕೊಂಡಿತ್ತು. ಆ ವಿಮಾನ ಅಪಘಾತದಲ್ಲಿ 97 ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಪವಾಡಸದೃಶರಾಗಿ ಬದುಕುಳಿದಿದ್ದಾರೆ.

ಕುವೈತ್ ಏರ್ 7 ಪಾಕಿಸ್ತಾನಿ ಪೈಲಟ್‌ಗಳು ಮತ್ತು 56 ಇಂಜಿನಿಯರ್‌ಗಳನ್ನು ಸೇವೆಯಿಂದ ಹೊರಗಿಟ್ಟಿದೆ ಎಂದು ‘ಎಕ್ಸ್ ಪ್ರೆಸ್ ಟ್ರಿಬ್ಯೂನ್’ ಮೂಲಗಳನ್ನು ಉಲ್ಲೇಖಿಸಿ ರವಿವಾರ ವರದಿ ಮಾಡಿದೆ. ಅದೇ ವೇಳೆ, ಖತರ್ ಏರ್‌ವೇಸ್, ಒಮಾನ್ ಏರ್ ಮತ್ತು ವಿಯೆಟ್ನಾಮ್ ಏರ್‌ಲೈನ್ಸ್‌ಗಳು ಪಾಕಿಸ್ತಾನಿ ಪೈಲಟ್‌ಗಳು, ಇಂಜಿನಿಯರ್‌ಗಳು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಯ ಪಟ್ಟಿಗಳನ್ನು ತಯಾರಿಸಿವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News