ಚೀನಾದ ಸಂಭಾವ್ಯ ಕೋವಿಡ್-19 ಲಸಿಕೆಯ ಸೇನಾ ಬಳಕೆಗೆ ಅನುಮೋದನೆ

Update: 2020-06-29 16:54 GMT

ಬೀಜಿಂಗ್ (ಚೀನಾ), ಜೂ. 29: ಚೀನಾ ಸೇನೆಯ ಸಂಶೋಧನಾ ಘಟಕವು ಕ್ಯಾನ್‌ಸಿನೊ ಬಯಾಲಜಿಕ್ಸ್‌ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಸಂಭಾವ್ಯ ಕೋವಿಡ್-19 ಲಸಿಕೆಯನ್ನು ಬಳಸಲು ಚೀನಾ ಸೇನೆಗೆ ಅನುಮೋದನೆ ಲಭಿಸಿದೆ ಎಂದು ಕ್ಯಾನ್‌ಸಿನೊ ಬಯಾಲಜಿಕ್ಸ್ ಸೋಮವಾರ ತಿಳಿಸಿದೆ. ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎನ್ನುವುದು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಅದು ಹೇಳಿದೆ.

ನೂತನ-ಕೊರೋನ ವೈರಸ್ ಉಂಟು ಮಾಡುವ ಶ್ವಾಸಕೋಶದ ಕಾಯಿಲೆಗಾಗಿ ಚೀನಾದ ಕಂಪೆನಿಗಳು ಮತ್ತು ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಹಾಗೂ ಮಾನವ ಪ್ರಯೋಗಕ್ಕೆ ಅಂಗೀಕಾರ ಪಡೆದಿರುವ 8 ಸಂಭಾವ್ಯ ಲಸಿಕೆಗಳ ಪೈಕಿ ಕ್ಯಾನ್‌ಸಿನೊ ಬಯಾಲಜಿಕ್ಸ್ ಅಭಿವೃದ್ಧಿಪಡಿಸಿರುವ ಎಡಿ5-ಎನ್‌ಸಿಒವಿ ಲಸಿಕೆಯೂ ಒಂದು. ಇದು ಕೆನಡದಲ್ಲಿಯೂ ಮಾನವರ ಮೇಲಿನ ಪ್ರಯೋಗಕ್ಕಾಗಿ ಅನುಮೋದನೆ ಪಡೆದುಕೊಂಡಿದೆ.

ಒಂದು ವರ್ಷದ ಅವಧಿಗೆ ಲಸಿಕೆಯ ಸೇನಾ ಬಳಕೆಗೆ ಚೀನಾದ ಸೆಂಟ್ರಲ್ ಮಿಲಿಟರಿ ಕಮಿಶನ್ ಜೂನ್ 25ರಂದು ಅನುಮೋದನೆ ನೀಡಿದೆ ಎಂದು ಕ್ಯಾನ್‌ಸಿನೊ ದಾಖಲೆಯೊಂದರಲ್ಲಿ ತಿಳಿಸಿದೆ. ಲಸಿಕೆಯನ್ನು ಮಿಲಿಟರಿ ಮೆಡಿಕಲ್ ಸಯನ್ಸಸ್‌ನ ಅಕಾಡೆಮಿಯಲ್ಲಿ ಕ್ಯಾನ್‌ಸಿನೊ ಮತ್ತು ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

‘‘ಎಡಿ5-ಎನ್‌ಸಿಒವಿ ಎಂಬ ಲಸಿಕೆಯು ಸದ್ಯಕ್ಕೆ ಸೇನಾ ಬಳಕೆಗೆ ಮಾತ್ರ ಸೀಮಿತವಾಗಿದೆ ಹಾಗೂ ಲಾಜಿಸ್ಟಿಕ್ಸ್ ಸಪೋರ್ಟ್ ಇಲಾಖೆಯ ಅನುಮೋದನೆಯಿಲ್ಲದೆ ಅದರ ಬಳಕೆಯನ್ನು ವಿಸ್ತರಿಸುವಂತಿಲ್ಲ’’ ಎಂದು ಸೆಂಟ್ರಲ್ ಮಿಲಿಟರಿ ಕಮಿಶನ್ ಇಲಾಖೆಯನ್ನು ಉಲ್ಲೇಖಿಸುತ್ತಾ ಕ್ಯಾನ್‌ಸಿನೊ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News