ಉಚಿತ ಕೋವಿಡ್-19 ಲಸಿಕೆಗಾಗಿ ನೊಬೆಲ್ ಪ್ರಶಸ್ತಿ ವಿಜೇತರು, ಜಾಗತಿಕ ನಾಯಕರ ಮನವಿ

Update: 2020-06-29 16:57 GMT

ಢಾಕಾ (ಬಾಂಗ್ಲಾದೇಶ), ಜೂ. 29: ಯಾವುದೇ ಸಂಭಾವ್ಯ ಕೋವಿಡ್-19 ಲಸಿಕೆಯನ್ನು ಅಗತ್ಯ ವಸ್ತು ಎಂಬುದಾಗಿ ಪರಿಗಣಿಸಿ ಜಾಗತಿಕ ಮಟ್ಟದಲ್ಲಿ ಲಭಿಸುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುವ ಪತ್ರವೊಂದಕ್ಕೆ 18 ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ಸೇರಿದಂತೆ 100ಕ್ಕೂ ಅಧಿಕ ಜಾಗತಿಕ ನಾಯಕರು ಸಹಿ ಹಾಕಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಢಾಕಾದಲ್ಲಿ ಸ್ಥಾಪಿಸಿರುವ ಯೂನಸ್ ಸೆಂಟರ್ ಈ ವಿಷಯವನ್ನು ತಿಳಿಸಿದೆ.

ಮಾಜಿ ಅಧ್ಯಕ್ಷರು, ರಾಜಕಾರಣಿಗಳು, ಜಗದ್ವಿಖ್ಯಾತ ಕಲಾವಿದರು ಮತ್ತು ಅಂತರ್‌ರಾಷ್ಟ್ರೀಯ ಸಂಘಟನೆಗಳು ಈ ಅಭಿಯಾನದಲ್ಲಿ ಕೈಜೋಡಿಸಿವೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಡೆಸ್ಮಂಡ್ ಟೂಟು, ಮಿಖೈಲ್ ಗೋರ್ಬಚೆವ್, ಮಲಾಲಾ ಯೂಸುಫ್‌ಝಾಯಿ, ಜಾರ್ಜ್ ಕ್ಲೂನಿ, ಥಾಮಸ್ ಬ್ಯಾಕ್ ಮತ್ತು ಆ್ಯಂಡ್ರಿ ಬೋಸೆಲಿ ಸೇರಿದ್ದಾರೆ.

‘‘ಲಸಿಕೆಯನ್ನು ಉತ್ಪಾದಿಸಿ ಜಗತ್ತಿನಾದ್ಯಂತ ಉಚಿತವಾಗಿ ವಿತರಿಸಲು ಮುಂದೆ ಬರುವಂತೆ ಸರಕಾರಗಳು, ಪ್ರತಿಷ್ಠಾನಗಳು, ದಾನಿಗಳು ಮತ್ತು ಸಾಮಾಜಿಕ ಉದ್ದಿಮೆಗಳಿಗೆ ನಾವು ಮನವಿ ಮಾಡುತ್ತೇವೆ. ಯಾವುದೇ ರೀತಿಯ ತಾರತಮ್ಯವಿಲ್ಲದೆ, ಎಲ್ಲ ದುರ್ಬಲ ವ್ಯಕ್ತಿಗಳನ್ನು ರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಮರುದೃಢೀಕರಿಸುವಂತೆ ನಾವು ಎಲ್ಲ ಸಾಮಾಜಿಕ, ರಾಜಕೀಯ ಮತ್ತು ಆರೋಗ್ಯ ವಲಯಗಳನ್ನು ನಾವು ಆಹ್ವಾನಿಸುತ್ತೇವೆ’’ ಎಂದು ರವಿವಾರ ಪ್ರಕಟಗೊಂಡಿರುವ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News