ರಾಮ್‌ದೇವ್ ಅವರ ಪತಂಜಲಿ 'ಕೋವಿಡ್ ಕಿಟ್‌' ಮಾರಾಟ ಮಾಡುವಂತಿಲ್ಲ

Update: 2020-06-30 03:48 GMT

ಹೊಸದಿಲ್ಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಅಭಿವೃದ್ಧಿಪಡಿಸಿದ ಕೋವಿಡ್ ಗುಣಪಡಿಸುವ ಕಿಟ್ ಮಾರಾಟ ಮಾಡುವಂತಿಲ್ಲ ಎಂದು 17 ಮಂದಿಯ ಕಾರ್ಯಪಡೆ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ.

ಈ ಔಷಧಿಯ ಕ್ಷಮತೆ ಅಧ್ಯಯನ ಮಾಡಲು ನೇಮಿಸಿದ್ದ ಕಾರ್ಯಪಡೆ ಈ ಸಲಹೆ ಮಾಡಿದೆ. ಕಂಪನಿ ಮೊದಲು ಕ್ಲಿನಿಕಲ್ ಪರೀಕ್ಷೆ ನಡೆಸಬೇಕು ಹಾಗೂ ಆ ಬಳಿಕವಷ್ಟೇ ಕಂಪನಿ ಅನುಮೋದನೆ ಕೋರಿದಂತೆ ಕಫ, ಜ್ವರ ಮತ್ತಿತರ ಸಮಸ್ಯೆಗಳಿಗೆ ಈ ಔಷಧಿಯನ್ನು ಮಾರಾಟ ಮಾಡಬೇಕು ಎಂದು ಆಯುಷ್ ಸಚಿವಾಲಯಕ್ಕೆ ನೀಡಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಬಾಬಾ ರಾಮ್‌ದೇವ್ ಕಳೆದ ವಾರ ಕೊರೋನಿಲ್ ಹೆಸರಿನ ಔಷಧ ಸೇರಿದಂತೆ ಮೂರು ಔಷಧೀಯ ಉತ್ಪನ್ನಗಳ ಕಿಟ್ ಬಿಡುಗಡೆ ಮಾಡಿ, ಇದು ನೋವಲ್ ಕೊರೋನಾ ವೈರಸ್ ಸೋಂಕನ್ನು ನಿವಾರಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಆದರೆ ಇದು ಯಾರನ್ನೂ ಗುಣಪಡಿಸಿದ ನಿದರ್ಶನ ಇದುವರೆಗೆ ಕಂಡುಬಂದಿಲ್ಲ.

ಆದಾಗ್ಯೂ ಈ ಬಗ್ಗೆ ಪರಿಶೀಲನೆ ಪ್ರಕ್ರಿಯೆ ಮುಗಿಯುವವರೆಗೆ ಈ ಉತ್ಪನ್ನದ ಪ್ರಚಾರವನ್ನು ಸ್ಥಗಿತಗೊಳಿಸುವಂತೆ ಆಯುಷ್ ಸಚಿವಾಲಯ ಸೂಚನೆ ನೀಡಿತ್ತು. ಈ ವಿಷಯವನ್ನು ಕಳೆದ ಏಪ್ರಿಲ್‌ನಲ್ಲಿ ಕೋವಿಡ್ ಸಂಬಂಧಿ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಮನ್ವಯ ಮತ್ತು ಕಣ್ಗಾವಲಿಗಾಗಿ ರಚಿಸಿದ್ದ ಅಂತರ್ ‌ಶಿಸ್ತೀಯ ಆಯುಷ್ ಕಾರ್ಯಪಡೆಗೆ ಹಸ್ತಾಂತರಿಸಲಾಗಿತ್ತು.

ಈ ಕಾರ್ಯಪಡೆಯಲ್ಲಿ ಎಐಐಎಂಎಸ್, ಐಸಿಎಂಆರ್, ವಿಶ್ವ ಆರೋಗ್ಯ ಸಂಸ್ಥೆ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ತಜ್ಞರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News