ಉದ್ಯೋಗವಿಲ್ಲದೆ ಸಿಎಂ ನಿವಾಸದೆದುರು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

Update: 2020-07-01 11:26 GMT

ರಾಯಪುರ್ : ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಛತ್ತೀಸಗಢ ಸಿಎಂ ಭೂಪೇಶ್ ಬಾಘೇಲ್ ಅವರ ಅಧಿಕೃತ ನಿವಾಸದೆದುರು ನಿರುದ್ಯೋಗಿ ಯುವಕನೊಬ್ಬ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಘಟನೆ ಕುರಿತು  ಮೆಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ.

ಜಿಲ್ಲಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ತನಿಖೆ ನಡೆಸಲಿದ್ದಾರೆ ಎಂದು ಧಮ್ತರಿ ಜಿಲ್ಲಾಧಿಕಾರಿಯ ಆದೇಶದಲ್ಲಿ ತಿಳಿಸಲಾಗಿದ್ದು, ತನಿಖೆ ಒಂದು ತಿಂಗಳೊಳಗೆ ಪೂರ್ತಿಗೊಳ್ಳಬೇಕು ಎಂದೂ ಅದರಲ್ಲಿ ಹೇಳಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ 27 ವರ್ಷದ ಯುವಕನನ್ನು ಸಿಎಂ ನಿವಾಸದ  ಭದ್ರತಾ ಸಿಬ್ಬಂದಿ ತಕ್ಷಣ ರಕ್ಷಿಸಿ  ಆಸ್ಪತ್ರೆಗೆ ದಾಖಲಿಸಿದ್ದಾರೆ. “ನಿರುದ್ಯೋಗಿಯಾಗಿದ್ದ ಆತನಿಗೆ ಮನೆಯಲ್ಲಿ ಊಟಕ್ಕೂ ಗತಿಯಿರಲಿಲ್ಲ, ನೆರೆಮನೆಯವರಿಂದ ಕಾಡಿ ಬೇಡಿ ಐದು ಕೆಜಿ ಅಕ್ಕಿ ತಂದಿದ್ದ, ಯಾರಿಗೂ ಹೇಳದೆ ರಾಯಪುರ್‍ಗೆ ತೆರಳಿದ್ದ'' ಎಂದು ಆತನ ತಂದೆ ಹೇಳಿದ್ದಾರೆ.

ಆತನಿಗೆ ಶೇ 60ರಷ್ಟು ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಈ ಯುವಕ ಮಾನಸಿಕ ಅಸ್ವಸ್ಥ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಕಾಂಗ್ರೆಸ್ ಸರಕಾರ ವಿಫಲವಾಗಿರುವುದರಿಂದ ಈತನ ಆತ್ಮಹತ್ಯೆ ಯತ್ನ ಯುವಜನತೆಯಲ್ಲಿರುವ ಹತಾಶ ಭಾವನೆಯನ್ನು ಪ್ರತಿಫಲಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News