ಪಾಕ್ ವಿಮಾನಗಳಿಗೆ ಐರೋಪ್ಯ ಒಕ್ಕೂಟ 6 ತಿಂಗಳು ನಿಷೇಧ

Update: 2020-07-01 16:27 GMT

ಕರಾಚಿ (ಪಾಕಿಸ್ತಾನ), ಜು. 1: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ನ ವಿಮಾನಗಳು ಐರೋಪ್ಯ ಒಕ್ಕೂಟ ಪ್ರವೇಶಿಸುವುದನ್ನು ಅಲ್ಲಿನ ವಿಮಾನಯಾನ ನಿಯಂತ್ರಣ ಸಂಸ್ಥೆಯು ಆರು ತಿಂಗಳ ಕಾಲ ನಿಷೇಧಿಸಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪಾಕಿಸ್ತಾನದ ಸರಕಾರಿ ಒಡೆತನದ ವಿಮಾನಯಾನ ಸಂಸ್ಥೆಯು ನಕಲಿ ಅಥವಾ ಸಂಶಯಾಸ್ಪದ ಪರವಾನಿಗೆಗಳನ್ನು ಹೊಂದಿರುವುದಕ್ಕಾಗಿ ತನ್ನ ಸುಮಾರು ಮೂರನೇ ಒಂದರಷ್ಟು ಪೈಲಟ್‌ಗಳನ್ನು ಸೇವೆಯಿಂದ ಹೊರಗಿಟ್ಟ ಬಳಕ ಐರೋಪ್ಯ ಒಕ್ಕೂಟವು ಈ ನಿರ್ಧಾರ ತೆಗೆದುಕೊಂಡಿದೆ.

ಉಳಿದ ಎಲ್ಲ ಪೈಲಟ್‌ಗಳು ಸರಿಯಾದ ಅರ್ಹತೆ ಹೊಂದಿದ್ದಾರೆಯೇ ಎನ್ನುವುದು ಇನ್ನೂ ಖಚಿತವಿಲ್ಲ ಹಾಗೂ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಮೇಲೆ ನಾವು ವಿಶ್ವಾಸ ಕಳೆದುಕೊಂಡಿದ್ದೇವೆ ಎಂಬುದಾಗಿ ಯುರೋಪಿಯನ್ ಯೂನಿಯನ್ ಸುರಕ್ಷತಾ ಸಂಸ್ಥೆ (ಇಎಎಸ್‌ಎ) ಪಿಐಎಗೆ ತಿಳಿಸಿದೆ ಎಂದು ಪಿಐಎ ವಕ್ತಾರ ಅಬ್ದುಲ್ಲಾ ಖಾನ್ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದರು.

ಪಾಕಿಸ್ತಾನದಲ್ಲಿ ನೀಡಲಾಗಿರುವ ಹೆಚ್ಚಿನ ಪೈಲಟ್ ಲೈಸನ್ಸ್‌ಗಳು ನಕಲಿ ಎಂದು ಹೇಳುವ ತನಿಖಾ ವರದಿಯೊಂದನ್ನು ಪಾಕಿಸ್ತಾನದ ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆಯೊಂದನ್ನು ನೀಡಿರುವ ಇಎಎಸ್‌ಎ, ಪಿಐಎ ಮತ್ತು ಪಾಕಿಸ್ತಾನದ ಸಣ್ಣ ಖಾಸಗಿ ವಿಮಾನವೊಂದರ ವಿಮಾನಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News