ಕೋವಿಡ್-19: ಭಾರತದಲ್ಲಿ 3.6 ಲ.ರೋಗಿಗಳು ಗುಣಮುಖ, ಚೇತರಿಕೆ ದರ ಶೇ.59.52ಕ್ಕೇರಿಕೆ

Update: 2020-07-02 14:22 GMT

ಹೊಸದಿಲ್ಲಿ,ಜು.2: ಗುರುವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 11,881 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಚೇತರಿಸಿಕೊಂಡಿರುವವರ ಒಟ್ಟು ಸಂಖ್ಯೆ 3,59,859ಕ್ಕೆ ತಲುಪಿದೆ. ಇದರೊಂದಿಗೆ ಕೊರೋನ ವೈರಸ್ ಸೋಂಕಿನಿಂದ ಚೇತರಿಕೆ ದರ ಶೇ.59.52ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

 ದೇಶದಲ್ಲೀಗ 2,26,947 ಸಕ್ರಿಯ ಕೊರೋನ ವೈರಸ್ ಪ್ರಕರಣಗಳಿದ್ದು,ಎಲ್ಲ ರೋಗಿಗಳು ಸೂಕ್ತ ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದೂ ಅದು ಹೇಳಿದೆ.

ಕೊರೋನ ವೈರಸ್‌ನಿಂದ ದೇಶದಲ್ಲಿಯೇ ಅತ್ಯಂತ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರ ರೋಗಿಗಳ ಚೇತರಿಕೆ ಪ್ರಮಾಣದಲ್ಲಿ ಉನ್ನತ ಸಾಧನೆಯನ್ನು ಮಾಡಿರುವ 15 ರಾಜ್ಯಗಳ ಪೈಕಿಯೂ ಅಗ್ರಸ್ಥಾನದಲ್ಲಿದೆ. ಚೇತರಿಕೆ ದರದಲ್ಲಿ ದಿಲ್ಲಿ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಹರ್ಯಾಣ, ತೆಲಂಗಾಣ, ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ಅಸ್ಸಾಂ ಮತ್ತು ಒಡಿಶಾ ನಂತರದ ಸ್ಥಾನಗಳಲ್ಲಿವೆ.

                             ಆರನೇ ದಿನವೂ 18,000ಕ್ಕೂ ಹೆಚ್ಚು ಹೊಸ ಪ್ರಕರಣಗಳು

ಸತತ ಆರನೇ ದಿನವಾದ ಗುರುವಾರವೂ ಭಾರತದಲ್ಲಿ 18,000ಕ್ಕೂ ಅಧಿಕ ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ.

ಜೂನ್ 1ರಿಂದ ಈವರೆಗೆ ದೇಶದಲ್ಲಿ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖೆಯಲ್ಲಿ 4,14,106ರಷ್ಟು ಏರಿಕೆಯಾಗಿದ್ದು,ಗುರುವಾರ 6,04,641ಕ್ಕೆ ತಲುಪಿದೆ. ಗುರುವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 19,148 ಹೊಸ ಪ್ರಕರಣಗಳು ದಾಖಲಾಗಿದ್ದು, 434 ಜನರು ಕೊರೋನ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ,ಮೃತರ ಒಟ್ಟು ಸಂಖ್ಯೆ 17,834ಕ್ಕೇರಿದೆ.

ತನ್ಮಧ್ಯೆ ದೇಶಾದ್ಯಂತ ಕೊರೋನ ವೈರಸ್ ಪತ್ತೆಗಾಗಿ ನಡೆಸಲಾದ ಪರೀಕ್ಷೆಗಳ ಸಂಖ್ಯೆ ಗುರುವಾರ 90 ಲಕ್ಷದ ಗಡಿಯನ್ನು ದಾಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯು ತಿಳಿಸಿದೆ.

ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ತಲುಪಲು 110 ದಿನಗಳು ಬೇಕಾಗಿದ್ದವು. ಅಲ್ಲಿಂದೀಚಿಗೆ ಕೇವಲ 44 ದಿನಗಳ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಗುರುವಾರ ಆರು ಲಕ್ಷದ ಗಡಿಯನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News