ರಾಜ್‌ನಾಥ್ ಸಿಂಗ್ ಲಡಾಕ್ ಭೇಟಿ ಮುಂದೂಡಿಕೆ

Update: 2020-07-02 17:42 GMT

    

ಹೊಸದಿಲ್ಲಿ, ಜು.3: ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಹಾಗೂ ಚೀನಾ ಸೇನೆಗಳ ನಡುವೆ ಉದ್ವಿಗ್ನತೆ ನೆಲೆಸಿರುವಂತೆಯೇ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಲಡಾಕ್ ಭೇಟಿಯನ್ನು ಮುಂದೂಡಲ್ಪಟ್ಟಿದೆಯೆಂದು ‘ಲೈವ್ ಮಿಂಟ್’ ಸುದ್ದಿಜಾಲ ತಾಣ ವರದಿ ಮಾಡಿದೆ..

ರಾಜ್‌ನಾಥ್ ಸಿಂಗ್ ಅವರು ಶುಕ್ರವಾರ ಲೇಹ್‌ಗೆ ಆಗಮಿಸುವವರಿದ್ದರು. ಗಡಿ ಮುಂಚೂಣಿ ಸ್ಥಳಗಳಲ್ಲಿ ಭಾರತೀಯ ಸೇನಾಪಡೆಗಳ ಕಾರ್ಯಸನ್ನದ್ಧತೆಯ ಪರಾಮರ್ಶೆ ನಡೆಸಲು ಹಾಗೂ ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಯೋಧರನ್ನು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿತ್ತು.

ರಕ್ಷಣಾ ಸಚಿವರ ಲಡಾಕ್ ಭೇಟಿಯನ್ನು ಯಾಕೆ ಮುಂದೂಡಲ್ಪಟ್ಟಿದೆೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜೂನ್ 6, 22 ಹಾಗೂ 30ರಂದು ಕಾರ್ಪ್ಸ್ ಕಮಾಂಡರ್ ಮಟ್ಟದ ಸೇನಾಧಿಕಾರಿಗಳ ಜೊತೆ ನಡೆದ ಮಾತುಕತೆಯಲ್ಲಿ ಚೀನಾವು ಎಲ್‌ಎಸಿಯಿಂದ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಭರವಸೆ ನೀಡಿತ್ತು. ಚೀನಿ ಪಡೆಗಳು ತಮ್ಮ ಈ ಬದ್ಧತೆಯನ್ನು ಗೌರವಿಸುತ್ತವೆಯೇ ಎಂಬುದನ್ನು ಕಾದುನೋಡುವ ಉದ್ದೇಶದಿಂದ ರಾಜ್‌ನಾಥ್ ಸಿಂಗ್ ಅವರು ತಮ್ಮ ಶುಕ್ರವಾರದ ಲಡಾಕ್ ಭೇಟಿಯನ್ನು ಮುಂದೂಡಿರುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.

‘‘ರಕ್ಷಣಾ ಸಚಿವರು ಮುಂಚೂಣಿಯಲ್ಲಿ ನಿಯೋಜಿತರಾದ ಸೈನಿಕರನ್ನು ಭೇಟಿಯಾಗಲು ಆಗಮಿಸಿದಲ್ಲಿ, ಅವರಿಗೆ ಅದೊಂದು ದೊಡ್ಡ ಮಟ್ಟ ನೈತಿಕ ಉತ್ತೇಜನ ಸಿಕ್ಕಂತಾಗುವುದು. ಒಂದು ವೇಳೆ ಯಾವುದೇ ರೀತಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡಲ್ಲಿ ನಾವು ಸನ್ನದ್ಧರಾಗಿದ್ದೇವೆ ಎಂಬ ಸಂದೇಶವನ್ನು ಶತ್ರುವಿಗೆ ನೀಡಿದಂತಾಗುವುದು. ನಾವು ನಮ್ಮ ಸನ್ನದ್ಧತೆಯನ್ನು ಕಡಿಮೆಗೊಳಿಸಲಾರೆವು’’ ಎಂದು ಮೂಲಗಳು ತಿಳಿಸಿವೆ.

ಜೂನ್ 30ರಂದು ಉಭಯದೇಶಗಳ ಮಿಲಿಟರಿ ಅಧಿಕಾರಿಗಳ ಜೊತೆ ನಡೆದ ಮಾತುಕತೆಯ ಫಲಿತಾಂಶದ ಬಗ್ಗೆ ಚೀನಿಯರು ಆಶಾವಾದವನ್ನು ಹೊಂದಿದ್ದಾರೆಂದು ಚೀನಾ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಗಡಿಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಶಮನಗೊಳಿಸಲು ಗಡಿ ಮುಂಚೂಣಿ ಪಡೆಗಳನ್ನು ತಂಡತಂಡವಾಗಿ ಹಿಂದಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಭಾರತ ಹಾಗೂ ಚೀನಾ ಒಪ್ಪಿಕೊಂಡಿವೆ ಎಂದು ಅದು ತಿಳಿಸಿತ್ತು.ಗಲ್ವಾನ್ ಕಣಿವೆ, ಹಾಟ್‌ಸ್ಪ್ರಿಂಗ್ಸ್ ಹಾಗೂ ಪಂಗಾಂಗ್ ತ್ಸೊ ಪ್ರದೇಶಗಳಿಂದ ಹಿಂದೆ ಸರಿಯಲು ಚೀನಿಯರು ಸಮ್ಮತಿಸಿರುವುದು ಭಾರತದ ರಕ್ಷಣಾ ಕಾರ್ಯಾಲಯವು ದೃಢಪಡಿಸಿದೆಯೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News