ಯುದ್ಧವಿಮಾನ, ಕ್ಷಿಪಣಿ ಖರೀದಿಗೆ ಕೇಂದ್ರ ಅನುಮೋದನೆ

Update: 2020-07-02 17:45 GMT

 ಹೊಸದಿಲ್ಲಿ, ಜು.2: ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ವರ್ಧಿಸುವ ನಿಟ್ಟಿನಲ್ಲಿ 38,900 ಕೋಟಿ ರೂ. ವೆಚ್ಚದಲ್ಲಿ ಯುದ್ಧವಿಮಾನ, ಕ್ಷಿಪಣಿ ಹಾಗೂ ಇತರ ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಗುರುವಾರ ಅನುಮೋದನೆ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ರಶ್ಯಾದಿಂದ 21 ಮಿಗ್-29 ಯುದ್ಧವಿಮಾನ, ಎಚ್‌ಎಎಲ್‌ನಿಂದ 12 ಎಸ್‌ಯು-30 ಎಂಕೆಐ ವಿಮಾನ, 248 ಬಿವಿಆರ್(ದೃಶ್ಯ ವ್ಯಾಪ್ತಿಯನ್ನು ಮೀರಿದ) ಅಸ್ತ್ರ ಕ್ಷಿಪಣಿಗಳು ಹಾಗೂ ಈಗ ಇರುವ 59 ಮಿಗ್-29 ವಿಮಾನಗಳ ಆಧುನೀಕರಣ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಅತೀ ಎತ್ತರದಲ್ಲಿ ಹಾರುತ್ತಿರುವ ಸೂಪರ್‌ಸಾನಿಕ್ ವಿಮಾನವನ್ನು , ರಾತ್ರಿ ಮತ್ತು ಹಗಲಿನಲ್ಲೂ ನಾಶಗೊಳಿಸುವ ಸಾಮರ್ಥ್ಯವನ್ನು ಅಸ್ತ್ರ ಕ್ಷಿಪಣಿ ಹೊಂದಿವೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಪಿನಾಕಾ ಕ್ಷಿಪಣಿ ವ್ಯವಸ್ಥೆ ಹಾಗೂ 1,000 ಕಿ.ಮೀಗೂ ದೀರ್ಘವ್ಯಾಪ್ತಿಯ ಗುರಿ ತಲುಪಬಲ್ಲ ಕ್ಷಿಪಣಿಯ ಖರೀದಿಗೂ ಅನುಮೋದನೆ ದೊರೆತಿದೆ. ಈಗಿನ ಪರಿಸ್ಥಿತಿ ಹಾಗೂ ಗಡಿ ರಕ್ಷಣೆಗೆ ನಮ್ಮ ಸೇನಾಪಡೆಯನ್ನು ಸಶಕ್ತಗೊಳಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News