ತಂದೂರ್ ಒಲೆ ಹೊತ್ತಿಸುವಂತೆ ನನಗೆ ಹೇಳಿದ್ದರು: ಸೌದಿ ಕಾನ್ಸುಲೇಟ್ ಕಚೇರಿ ಸಿಬ್ಬಂದಿಯ ಸಾಕ್ಷ್ಯ

Update: 2020-07-04 17:29 GMT

ಇಸ್ತಾಂಬುಲ್ (ಟರ್ಕಿ), ಜು. 4: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಇಸ್ತಾಂಬುಲ್‌ ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿ ಪ್ರವೇಶಿಸಿದ ಬಳಿಕ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ, ತಂದೂರ್ ಒಲೆ ಹೊತ್ತಿಸುವಂತೆ ನನಗೆ ಸೂಚಿಸಲಾಯಿತು ಎಂದು ಕೌನ್ಸುಲೇಟ್‌ನ ಸಿಬ್ಬಂದಿಯೊಬ್ಬರು ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದರು.

2018 ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ‘ವಾಶಿಂಗ್ಟನ್ ಪೋಸ್ಟ್’ನ ಅಂಕಣಕಾರರೂ ಆಗಿದ್ದ ಖಶೋಗಿಯನ್ನು ಹತ್ಯೆಗೈಯ್ಯಲಾಗಿತ್ತು. ಇದಕ್ಕಾಗಿ ಆ ದಿನ ಕೌನ್ಸುಲೇಟ್‌ಗೆ ವಿಶೇಷ ವಿಮಾನವೊಂದರಲ್ಲಿ ಸೌದಿ ಅರೇಬಿಯದ 20 ಅಧಿಕಾರಿಗಳ ತಂಡ ಆಗಮಿಸಿತ್ತು ಎನ್ನುವುದು ಬಳಿಕ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಹತ್ಯೆಗೆ ಸಂಬಂಧಿಸಿ ಆ 20 ಮಂದಿಯ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆ ಅವರ ಅನುಪಸ್ಥಿತಿಯಲ್ಲಿ ಇಸ್ತಾಂಬುಲ್‌ನಲ್ಲಿ ಶುಕ್ರವಾರ ಆರಂಭಗೊಂಡಿತು.

ವಿಚಾರಣೆಯ ಮೊದಲ ದಿನದಂದು, ಕೌನ್ಸುಲೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ತಂತ್ರಜ್ಞ ಝೆಕಿ ಡೆಮಿರ್ ಸಾಕ್ಷ್ಯ ನುಡಿದರು. ಖಶೋಗಿ ಕೌನ್ಸುಲೇಟ್ ಪ್ರವೇಶಿಸಿದ ಬಳಿಕ ಸಮೀಪದಲೇ ಇದ್ದ ಕೌನ್ಸುಲ್‌ರ ನಿವಾಸಕ್ಕೆ ನನ್ನನ್ನು ಕರೆಯಲಾಯಿತು ಎಂದು ಅವರು ಹೇಳಿದರು.

‘‘ಅಲ್ಲಿ ಐದರಿಂದ ಆರು ಮಂದಿ ಇದ್ದರು. ತಂದೂರ್ ಒಲೆಯನ್ನು ಹೊತ್ತಿಸುವಂತೆ ಅವರು ನನಗೆ ಸೂಚಿಸಿದರು. ಅಲ್ಲಿ ಗಾಬರಿಯ ವಾತಾವರಣವಿತ್ತು’’ ಎಂದು ಅವರು ನುಡಿದರು.

ತನ್ನ ಟರ್ಕಿಯ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ದಾಖಲೆಪತ್ರಗಳನ್ನು ತರಲು ಖಶೋಗಿ ಕೌನ್ಸುಲೇಟ್ ಕಚೇರಿಗೆ ಹೋಗಿದ್ದರು. ಆ ಬಳಿಕ ಅವರು ಪತ್ತೆಯಾಗಿಲ್ಲ. ಅವರ ಕೊಲೆಗೆ ಸ್ವತಃ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶಿಸಿದ್ದರು ಎಂಬುದಾಗಿ ಕೆಲವು ಪಾಶ್ಚಾತ್ಯ ದೇಶಗಳು ಮತ್ತು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಆರೋಪಿಸಿದೆ.

ಸೌದಿಯಲ್ಲಿ ಆರೋಪಿಗಳ ರಹಸ್ಯ ವಿಚಾರಣೆ

ವಿಚಾರಣೆಗಾಗಿ 20 ಆರೋಪಿಗಳನ್ನು ಗಡಿಪಾರು ಮಾಡುವಂತೆ ಟರ್ಕಿ ಸೌದಿ ಅರೇಬಿಯಕ್ಕೆ ಮನವಿ ಮಾಡಿತ್ತು. ಆದರೆ, ಅವರನ್ನು ಗಡಿಪಾರು ಮಾಡಲು ನಿರಾಕರಿಸಿದ ಸೌದಿ, ಅವರನ್ನು ದೇಶದಲ್ಲೇ ವಿಚಾರಣೆಗೆ ಗುರಿಪಡಿಸುವುದಾಗಿ ಹೇಳಿತ್ತು.

ಅಂತಿಮವಾಗಿ 11 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಿದ ಸೌದಿ ಸರಕಾರವು ಅವರನ್ನು ರಹಸ್ಯ ವಿಚಾರಣೆಗೆ ಗುರಿಪಡಿಸಿತು. ಸೌದಿ ನ್ಯಾಯಾಲಯವು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಆಪ್ತ ಸಲಹೆಗಾರರನ್ನು ದೋಷಮುಕ್ತಗೊಳಿಸಿತು. ಐವರಿಗೆ ಮರಣ ದಂಡನೆ ವಿಧಿಸಿತು ಹಾಗೂ ಮೂವರಿಗೆ ಒಟ್ಟು 24 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಇತ್ತೀಚೆಗೆ, ಜಮಾಲ್ ಖಶೋಗಿಯ ಪುತ್ರರು ತಮ್ಮ ತಂದೆಯ ಹಂತಕರನ್ನು ಕ್ಷಮಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಮರಣ ದಂಡನೆಗೆ ಒಳಗಾಗಿರುವವರ ಶಿಕ್ಷೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News