ಉ.ಪ್ರದೇಶದ 8 ಪೊಲೀಸರ ಹತ್ಯೆ ‘ಎನ್ ಕೌಂಟರ್ ಸ್ಪೆಷಲಿಸ್ಟ್’ ಸರಕಾರದ ಬಣ್ಣ ಬಯಲಾಗಿಸಿದೆ: ಶಿವಸೇನೆ

Update: 2020-07-06 13:43 GMT
Photo: twitter.com/shivsena

ಮುಂಬೈ, ಜು.6: ಎಂಟು ಪೊಲೀಸರು ಸಾವನ್ನಪ್ಪಿದ ಕಾನ್ಪುರ ಎನ್ ಕೌಂಟರ್ ಪ್ರಕರಣ ‘ಎನ್ ಕೌಂಟರ್ ಸ್ಪೆಷಲಿಸ್ಟ್’ ಎಂದು ಬೀಗುತ್ತಿದ್ದ ಉತ್ತರಪ್ರದೇಶ ಸರಕಾರದ ಬಣ್ಣ ಬಯಲಾಗಿಸಿದೆ ಮತ್ತು ರಾಜ್ಯದಲ್ಲಿ ಗೂಂಡಾಗಿರಿಯನ್ನು ಕೊನೆಗೊಳಿಸಲಾಗಿದೆ ಎಂಬ ಮುಖ್ಯಮಂತ್ರಿ ಆದಿತ್ಯನಾಥರ ಹೇಳಿಕೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ ಎಂದು ಶಿವಸೇನೆ ಹೇಳಿದೆ.

ಉತ್ತಮ ಪ್ರದೇಶ ಎಂದು ಈ ಹಿಂದೊಮ್ಮೆ ಕರೆಸಿಕೊಂಡಿದ್ದ ಉತ್ತರಪ್ರದೇಶ ಈಗ ಪೊಲೀಸರ ನೆತ್ತರಿನಲ್ಲಿ ಒದ್ದೆಯಾಗಿದ್ದು ಇದು ದೇಶಕ್ಕೇ ಆಘಾತ ನೀಡಿದ ವಿಷಯವಾಗಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಲೇಖನದಲ್ಲಿ ಬರೆಯಲಾಗಿದೆ.

ಕುಖ್ಯಾತ ಕ್ರಿಮಿನಲ್ ದುಬೆ ಎಂಬಾತನನ್ನು ಬಂಧಿಸಲು ಆತನ ಮನೆಗೆ ಪೊಲೀಸರು ತೆರಳಿದ್ದ ಸಂದರ್ಭ ದುಬೆಯ ಸಹಚರರು ನಡೆಸಿದ್ದ ಗುಂಡಿನ ದಾಳಿಯಲ್ಲಿ 8 ಪೊಲೀಸರು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ದುಬೆ ನೇಪಾಳಕ್ಕೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಇದು ನಿಜವಾದಲ್ಲಿ ಆ ದೇಶದಿಂದ ಆತನನ್ನು ಭಾರತಕ್ಕೆ ಕರೆತರುವುದು ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಸುಲಭವಲ್ಲ ಎಂದು ಶಿವಸೇನೆ ಹೇಳಿದೆ.

ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 3 ವರ್ಷಗಳ ಅವಧಿಯಲ್ಲೇ 113ಕ್ಕೂ ಹೆಚ್ಚು ಗೂಂಡಾಗಳನ್ನು ಎನ್ ಕೌಂಟರ್ ಮಾಡಲಾಗಿದೆ. ಆದರೆ ಸರಕಾರ ಸಿದ್ಧಪಡಿಸಿದ್ದ ಗೂಂಡಾಗಳ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಪಾತಕ ಕೃತ್ಯ ಎಸಗಿರುವ ದುಬೆಯ ಹೆಸರು ಕಾಣಿಸಿಕೊಳ್ಳದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ದುಬೆ ವಾಸಿಸುತ್ತಿದ್ದ ಮನೆಯನ್ನು  ಅಕ್ರಮವಾಗಿ ನಿರ್ಮಿಸಿರುವುದು ಎಂಟು ಪೊಲೀಸರ ಹತ್ಯೆಯಾದ ಬಳಿಕವಷ್ಟೇ ಸರಕಾರಕ್ಕೆ ತಿಳಿಯಿತೇ ಎಂದು ಶಿವಸೇನೆ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News