ಉದ್ವಿಗ್ನತೆ ಕಡಿಮೆಗೊಳಿಸಲು ಪರಿಣಾಮಕಾರಿ ಕ್ರಮ: ಚೀನಾ ಸೇನೆ

Update: 2020-07-06 16:20 GMT

ಬೀಜಿಂಗ್, ಜು.6: ಗಲ್ವಾನ್ ಕಣಿವೆಯಲ್ಲಿ ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ತನ್ನ ಮುಂಚೂಣಿ ಸೇನೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ಹಿಂದೆ ಸರಿಯುವ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಚೀನಾ ಸೋಮವಾರ ಹೇಳಿದೆ.

 ಚೀನಾದ ಸೇನೆ ಗಲ್ವಾನ್ ಕಣಿವೆಯಲ್ಲಿದ್ದ ಟೆಂಟ್ ಅನ್ನು ತೆಗೆಯುತ್ತಿದ್ದು ಕೆಲವು ಪ್ರದೇಶಗಳಿಂದ ಹಿಂದೆ ಸರಿಯುತ್ತಿದೆ. ಗಸ್ತು ಕೇಂದ್ರ 14ರಲ್ಲಿ ನಿರ್ಮಿಸಿದ್ದ ಶಿಬಿರ ಹಾಗೂ ಕೆಲವು ನಿರ್ಮಾಣಗಳನ್ನು ಪಿಎಲ್ಎ ಸೈನಿಕರು ತೆಗೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಚೀನಾದ ಸೇನೆ ಹಿಂದೆ ಸರಿಯುತ್ತಿರುವ ಪ್ರಥಮ ಸಂಕೇತ ಇದಾಗಿದೆ ಎಂದು ಭಾರತ ಸರಕಾರದ ಮೂಲಗಳು ಹೇಳಿಕೆ ನೀಡಿದ ಕೆಲವೇ ತಾಸುಗಳ ಬಳಿಕ ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಝಾವೊ ಲಿಜಿಯಾನ್, ಚೀನಾದ ಮುಂಚೂಣಿ ಪಡೆಗಳು ಗಲ್ವಾನ್ ನಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.

ಜೂನ್ 30ರಂದು ಭಾರತ- ಚೀನಾದ ಸೇನಾಪಡೆಗಳ ಮಧ್ಯೆ ಕಮಾಂಡರ್ ಮಟ್ಟದ ಮಾತುಕತೆ ನಡೆದಿದ್ದು, ಈ ಹಿಂದೆ ನಡೆದಿದ್ದ ಮಾತುಕತೆಯಲ್ಲಿ ಸಹಮತಕ್ಕೆ ಬರಲಾಗಿರುವ ವಿಷಯಗಳನ್ನು ಅನುಷ್ಟಾನಗೊಳಿಸುವತ್ತ ಪ್ರಯತ್ನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಲಿಜಿಯಾನ್ ಹೇಳಿದ್ದಾರೆ. ಗಡಿ ಭಾಗದಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಶಮಗೊಳಿಸುವಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗದ ನಿಕಟ ಸಂವಹನದ ಮೂಲಕ ಸಹಮತಕ್ಕೆ ಬರಲಾಗಿರುವ ನಿರ್ಧಾರಗಳನ್ನು ಜಾರಿಗೊಳಿಸುವಲ್ಲಿ ಭಾರತದ ಸೇನೆಯೂ ಚೀನಾದ ನಡೆಯನ್ನು ಅನುಸರಿಸುತ್ತದೆ ಎಂದು ನಾವು ಆಶಿಸುತ್ತೇವೆ ಎಂದವರು ಹೇಳಿದ್ದಾರೆ.

ಉಭಯ ಸೇನೆಗಳ ಕಮಾಂಡರ್ ಗಳ ಮಟ್ಟದ ಸಭೆಯಲ್ಲಿ ಆಗಿರುವ ಒಪ್ಪಂದದ ಪ್ರಕಾರ ಚೀನಾದ ಸೇನೆ ಗಲ್ವಾನ್ ನದಿಭಾಗದಿಂದ ಹಿಂದೆ ಸರಿಯುತ್ತಿದೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ. ಜೂನ್ 30ರಂದು ಭಾರತ-ಚೀನಾ ಸೇನೆಯ ಮಧ್ಯೆ ನಡೆದ ಮೂರನೇ ಸುತ್ತಿನ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಯಲ್ಲಿ, ಉಭಯ ಸೇನೆಗಳ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ತ್ವರಿತ, ಹಂತಹಂತವಾಗಿ ಸೇನೆಯನ್ನು ಹಿಂದಕ್ಕೆ ಸರಿಸುವ ಪ್ರಕ್ರಿಯೆಗೆ ಆದ್ಯತೆ ನೀಡಲು ಒಪ್ಪಲಾಗಿದೆ. ಜೂನ್ 6ರಂದು ನಡೆದಿದ್ದ ಪ್ರಥಮ ಸುತ್ತಿನ ಮಾತುಕತೆಯಲ್ಲಿ ಹಂತಹಂತವಾಗಿ ಸೇನೆ ಹಿಂದಕ್ಕೆ ಕರೆಸುವ ಯೋಜನೆಯನ್ನು ಉಭಯ ಸೇನೆಗಳೂ ಅಂತಿಮಗೊಳಿಸಿವೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News