ಕೊರೋನ ಆತಂಕದ ನಡುವೆ ಚೀನಾದಲ್ಲಿ ಬ್ಯುಬೋನಿಕ್ ಪ್ಲೇಗ್ ಪ್ರಕರಣ ವರದಿ

Update: 2020-07-06 16:26 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ಜು. 6: ಉತ್ತರ ಚೀನಾದ ನಗರ ಬಯನ್ನೂರ್ನಲ್ಲಿ ಶಂಕಿತ ಬ್ಯುಬೋನಿಕ್ ಪ್ಲೇಗ್ ಪ್ರಕರಣವೊಂದು ವರದಿಯಾಗಿದೆ ಎಂದು ದೇಶದ ಸರಕಾರಿ ಒಡೆತನದ ಮಾಧ್ಯಮ ‘ಪೀಪಲ್ಸ್ ಡೇಲಿ ಆನ್ಲೈನ್’ ರವಿವಾರ ವರದಿ ಮಾಡಿದೆ.

ಇನ್ನರ್ ಮಂಗೋಲಿಯ ಸ್ವಾಯತ್ತ ವಲಯದಲ್ಲಿರುವ ಬಯನ್ನೂರ್ನಲ್ಲಿ ಅಧಿಕಾರಿಗಳು ಈ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಮೂರನೇ ಹಂತದ ಎಚ್ಚರಿಕೆಯನ್ನು ಹೊರಡಿಸಿದ್ದಾರೆ ಎಂದು ಅದು ತಿಳಿಸಿದೆ.

ಶಂಕಿತ ಬ್ಯುಬೋನಿಕ್ ಪ್ಲೇಗ್ ಹೊಂದಿದ ರೋಗಿಯು ಬಯನ್ನೂರ್ನ ಆಸ್ಪತ್ರೆಯೊಂದರಲ್ಲಿ ಶನಿವಾರ ದಾಖಲಾಗಿದ್ದಾರೆ. ಎಚ್ಚರಿಕೆ ಅವಧಿಯು 2020ರ ಕೊನೆಯವರೆಗೂ ಮುಂದುವರಿಯಲಿದೆ ಎಂದು ಸ್ಥಳೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.

‘‘ಮಾನವ ಪ್ಲೇಗ್ ಸಾಂಕ್ರಾಮಿಕವು ಹರಡುವ ಅಪಾಯವನ್ನು ಈ ನಗರವು ಈಗ ಎದುರಿಸುತ್ತಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯವಾದ ಮುಂಜಾಗರೂಕತಾ ಕ್ರಮಗಳನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಏನಾದರೂ ಸಂಭವಿಸಿದರೆ ತಕ್ಷಣ ವರದಿ ಮಾಡಬೇಕು’’ ಎಂದು ಸ್ಥಳೀಯ ಆರೋಗ್ಯ ಪ್ರಾಧಿಕಾರ ಜನರಿಗೆ ಸೂಚಿಸಿದೆ.

ಪಶ್ಚಿಮ ಮಂಗೋಲಿಯದ ಖೋವ್ಡ್ ಪ್ರಾಂತದಲ್ಲಿ ವರದಿಯಾಗಿರುವ ಎರಡು ಶಂಕಿತ ಬ್ಯುಬೋನಿಕ್ ಪ್ಲೇಗ್ ಪ್ರಕರಣಗಳು ಪ್ರಯೋಗಾಲಯದಲ್ಲಿ ದೃಢಪಟ್ಟಿವೆ ಎಂದು ಜುಲೈ 1ರಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿತ್ತು. 27 ಮತ್ತು 17 ವರ್ಷಗಳ ಸಹೋದರರು ಮ್ಯಾರ್ಮಟ್ (ದೊಡ್ಡ ಜಾತಿಯ ಅಳಿಲು) ಮಾಂಸವನ್ನು ತಿಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಮಾಡಿತ್ತು. ಮ್ಯಾರ್ಮಟ್ ಮಾಂಸವನ್ನು ತಿನ್ನದಂತೆ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.

ಅವರೊಂದಿಗೆ ಸಂಪರ್ಕ ಹೊಂದಿದ್ದ ಒಟ್ಟು 146 ಮಂದಿಯನ್ನು ಪ್ರತ್ಯೇಕಿಸಲಾಗಿದೆ ಹಾಗೂ ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

24 ಗಂಟೆಗೂ ಕಡಿಮೆ ಅವಧಿಯಲ್ಲಿ ಸಾವು

ಬ್ಯುಬೋನಿಕ್ ಪ್ಲೇಗ್ ಬ್ಯಾಕ್ಟೀರಿಯದಿಂದಾಗಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದು, ಮ್ಯಾರ್ಮಟ್ಗಳು ಮುಂತಾದ ಕಾಡಿನಲ್ಲಿ ವಾಸಿಸುವ ಮೂಷಿಕಗಳ ಮೇಲೆ ಜೀವಿಸುವ ‘ಫ್ಲೀ’ ಎಂಬ ಜೀವಿಗಳಿಂದ ಹರಡುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಕಾಯಿಲೆಯು ವಯಸ್ಕ ವ್ಯಕ್ತಿಯೋರ್ವನನ್ನು 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಕೊಲ್ಲಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ಕಳೆದ ವರ್ಷ ಪಶ್ಚಿಮ ಮಂಗೋಲಿಯ ಪ್ರಾಂತ ಬಯನ್-ಉಲ್ಗಿಯಲ್ಲಿ ಹಸಿ ಮ್ಯಾರ್ಮಟ್ ಮಾಂಸವನ್ನು ತಿಂದ ದಂಪತಿಯೊಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News