ಡ್ರೋನ್ ತಯಾರಿಸುವ ಯುವಕನನ್ನು ಪ್ರಧಾನಿ DRDOಗೆ ನೇಮಕಗೊಳಿಸಿದ್ದಾರೆಂಬ ‘ಪೋಸ್ಟ್ ಕಾರ್ಡ್’ ಸುದ್ದಿ ಸುಳ್ಳು

Update: 2020-07-07 11:10 GMT

ಹೊಸದಿಲ್ಲಿ: ಇ-ತ್ಯಾಜ್ಯಗಳಿಂದ ಡ್ರೋನ್‍ ಗಳನ್ನು ತಯಾರಿಸುವ ಕರ್ನಾಟಕದ 22 ವರ್ಷದ ಪ್ರತಾಪ್ ಎನ್. ಎಂ. ಎಂಬವರನ್ನು ಪ್ರಧಾನಿ ನರೇಂದ್ರ ಮೋದಿ 'ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಲ್ಯಾಬೊರೇಟರಿ'ಗೆ (DRDO) ನೇಮಕ ಮಾಡಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಕಲಿ ಸುದ್ದಿಗಳ ತಾಣ ಪೋಸ್ಟ್ ಕಾರ್ಡ್ ನ್ಯೂಸ್ ಕೂಡ ಈ ಕುರಿತಂತೆ ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಪೋಸ್ಟ್ ಮಾಡಿದೆ.

ಅಮಿತ್ ಸಿಂಗ್ ರಾಜಾವತ್ ಎಂಬವರು ಕೂಡ ಈ ಕುರಿತು ಟ್ವೀಟ್ ಮಾಡಿ ಪ್ರಧಾನಿ ಮೋದಿ DRDOಗೆ  ಪ್ರತಾಪ್ ಎಂಬ ಯುವಕನನ್ನು ಸೇರಿಸಿದ್ದಾರೆಂದು ಬರೆದಿದ್ದು, ಈ  ಟ್ವೀಟ್ ಅನ್ನು 17,000ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಕೂಡ ಇದೇ ರೀತಿ ಇನ್ನೊಬ್ಬರು ಮಾಡಿದ ಟ್ವೀಟ್ ಕೂಡ ವೈರಲ್ ಆಗಿದೆ.

ಈ ಕುರಿತು altnews.in ಪ್ರತಾಪ್‍ ರನ್ನೇ ಸಂಪರ್ಕಿಸಿ ಸುದ್ದಿ ನಿಜವೇ ಎಂದು ಕೇಳಿದಾಗ, ತನ್ನ ಇತರ ಸಾಧನೆಗಳ ಕುರಿತ ಸುದ್ದಿ ನಿಜವಾಗಿದ್ದರೂ DRDOಗೆ ತನ್ನನ್ನು ಸೇರ್ಪಡೆಗೊಳಿಸಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. “ನನಗೆ ಪ್ರಧಾನಿ ಕಚೇರಿಯಿಂದ ಯಾವುದೇ ಆಫರ್ ಬಂದಿಲ್ಲ. ಪ್ರಧಾನಿ ಡಿಆರ್‍ಡಿಒಗೆ ಯಾರನ್ನೂ ನೇಮಕಾತಿಗೊಳಿಸಲು ಸಾಧ್ಯವಿಲ್ಲ ಅಲ್ಲವೇ? ಹಲವು ಕನ್ನಡ ಮಾಧ್ಯಮ ಸಂಸ್ಥೆಗಳು ನನಗೆ ಕರೆ ಬರಬಹುದೆಂದು ಹೇಳುತ್ತಿವೆ. ಆದರೆ ನನಗೆ ಈ ಬಗ್ಗೆ ಖಚಿತತೆಯಿಲ್ಲ. ಇಲ್ಲಿಯ ತನಕ ಯಾವುದೇ ಕರೆ ಅಥವಾ ಇಮೇಲ್ ಬಂದಿಲ್ಲ'' ಎಂದು ಅವರು ಹೇಳಿದ್ದಾರೆ.

2019ರಲ್ಲಿ ಇಂಡಿಯಾ ಟೈಮ್ಸ್ ಪ್ರಕಟಿಸಿದ ಸುದ್ದಿಯೊಂದರಲ್ಲಿ ‘ಪ್ರತಾಪ್ ರಾಷ್ಟ್ರೀಯ ಯೋಜನೆಗಳಿಗಾಗಿ ಡ್ರೋನ್ ಅಪ್ಲಿಕೇಶನ್ ಗಾಗಿ ಡಿಆರ್ ಡಿಒದೊಂದಿಗೆ ಕೆಲಸ ಮಾಡುತ್ತಿದ್ದಾರೆ’ ಎಂದು ಬರೆಯಲಾಗಿತ್ತು. ಈ ಬಗ್ಗೆ ಅವರನ್ನೇ ಪ್ರಶ್ನಿಸಿದಾಗ, ತಾನು ನೇರವಾಗಿ ಡಿಆರ್ ಡಿಒ ಜೊತೆ ಕೆಲಸ ಮಾಡಿಲ್ಲ. “ನಾನು ಬೆಂಗಳೂರು ಮೂಲದ ಕಂಪೆನಿಯ ಜೊತೆ ಕೆಲಸ ಮಾಡಿದ್ದೆ. ಅದು ಡಿಆರ್ ಡಿಒ ಜೊತೆ ಕೆಲಸ ಮಾಡುತ್ತಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News