ಬೇರೆಯವರಿಗೆ ಹಣ ನೀಡಿ ತನ್ನ ಪರೀಕ್ಷೆ ಬರೆಸಿಕೊಂಡಿದ್ದ ಟ್ರಂಪ್

Update: 2020-07-08 16:21 GMT

ನ್ಯೂಯಾರ್ಕ್, ಜು. 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓರ್ವ ತನ್ನನ್ನು ತಾನೇ ಹೊಗಳಿಕೊಳ್ಳುವ ಸುಳ್ಳುಗಾರ ಹಾಗೂ ಅವರನ್ನು ಆ ರೀತಿಯಾಗಿ ಅವರ ದರ್ಪದ ತಂದೆ ರೂಪಿಸಿದ್ದಾರೆ ಎಂಬುದಾಗಿ ಟ್ರಂಪ್ ಅಣ್ಣನ ಮಗಳು ಮೇರಿ ಟ್ರಂಪ್ ತನ್ನ ಪುಸ್ತಕ ‘ಟೂ ಮಚ್ ಆ್ಯಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟಡ್ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ ನಲ್ಲಿ ಹೇಳಿದ್ದಾರೆ.

ಅವರ ಪುಸ್ತಕದ ಕೆಲವು ಅಂಶಗಳನ್ನು ಮಂಗಳವಾರ ಬಹಿರಂಗಪಡಿಸಲಾಗಿದೆ.

ಇದಕ್ಕೆತಕ್ಷಣ ಪ್ರತಿಕ್ರಿಯಿಸಿರುವ ಶ್ವೇತಭವನ, ಈ ಪುಸ್ತಕವು ‘ಸುಳ್ಳುಗಳ ಪುಸ್ತಕ’ವಾಗಿದೆ ಎಂದು ಹೇಳಿದೆ. ಪುಸ್ತಕದ ಪ್ರಕಟನೆಯನ್ನು ನಿಲ್ಲಿಸಲು ಕಾನೂನು ಸಮರ ನಡೆದಿರುವಂತೆಯೇ, ಪುಸ್ತಕವು ಜುಲೈ 14ರಂದು ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಪುಸ್ತಕಕ್ಕೆ ಅಮೆಝಾನ್  ನಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಟ್ರಂಪ್ ವಂಚನೆಯನ್ನು ಜೀವನವಿಧಾನವಾಗಿ ಮಾಡಿಕೊಂಡಿದ್ದಾರೆ ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಮೇರಿ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಟ್ರಂಪ್ ತನ್ನ ಯೌವನದ ದಿನಗಳಲ್ಲೂ ಉದ್ದೇಶಪೂರ್ವಕವಾಗಿ ಅಮಾಯಕನಂತೆ ಬಿಂಬಿಸಿಕೊಳ್ಳುತ್ತಿದ್ದರು ಎಂದು ಮೇರಿ ಆರೋಪಿಸಿದ್ದಾರೆ.

ಶ್ವೇತಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರು ಮೇರಿ ಟ್ರಂಪ್ ಪುಸ್ತಕದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ವೇತಭವನದ ಹಿರಿಯ ಸಲಹೆಗಾರ ಕೆಲ್ಯಾನ್ ಕಾನ್ವೇ, ಅದು ಕೌಟುಂಬಿಕ ವಿಷಯ ಎಂದು ಹೇಳಿದ್ದಾರೆ.

ತನ್ನ ಪರವಾಗಿ ಪರೀಕ್ಷೆ ಬರೆಯಲು ಟ್ರಂಪ್ ಹಣಕೊಟ್ಟಿದ್ದರು: ಮೇರಿ ಟ್ರಂಪ್ ಆರೋಪ

ಅಧ್ಯಕ್ಷ ಟ್ರಂಪ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ತನ್ನ ಪರವಾಗಿ ಸಾಮಾನ್ಯ ಕಾಲೇಜು ಪ್ರವೇಶ ಪರೀಕ್ಷೆಯನ್ನು ಬರೆಯಲು ವ್ಯಕ್ತಿಯೊಬ್ಬನಿಗೆ ಹಣ ಕೊಟ್ಟಿದ್ದರು ಎಂದು ಅವರ ಅಣ್ಣನ ಮಗಳು ಮೇರಿ ಟ್ರಂಪ್ ತನ್ನ ಪುಸ್ತಕದಲ್ಲಿ ಆರೋಪಿಸಿದ್ದಾರೆ.

‘‘ಅಮೆರಿಕದ ಹೆಚ್ಚಿನ ವಿಶ್ವವಿದ್ಯಾನಿಲಯಗಳು ಅನುಸರಿಸುವ ಈ ಪ್ರವೇಶ ಪರೀಕ್ಷೆಯನ್ನು ತನ್ನ ಪರವಾಗಿ ಬರೆಯಲು ವ್ಯಕ್ತಿಯೊಬ್ಬನಿಗೆ ಟ್ರಂಪ್ ಹಣ ಪಾವತಿಸಿದ್ದಾರೆ’’ ಎಂದು ಮೇರಿ ಆರೋಪಿಸಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

‘‘ಈ ರೀತಿಯಾಗಿ ಅವರ ಪ್ರತಿನಿಧಿ ಅವರಿಗಾಗಿ ಗಳಿಸಿದ ಅಧಿಕ ಅಂಕದಿಂದಾಗಿ ಅವರಿಗೆ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ವಾರ್ಟನ್ ಬಿಝ್ನೆಸ್ ಸ್ಕೂಲ್ ನಲ್ಲಿ ಪ್ರವೇಶ ಲಭಿಸಿತು’’ ಎಂಬುದಾಗಿ ಮೇರಿ ಟ್ರಂಪ್ ಆರೋಪಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಪರವಾಗಿ ಬೇರೊಬ್ಬರು ಪರೀಕ್ಷೆ ಬರೆದಿದ್ದಾರೆ ಎಂಬ ಆರೋಪವು ಸಂಪೂರ್ಣ ಸುಳ್ಳು ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News