ರೈತರಿಂದ ಸೆಗಣಿ ಖರೀದಿಸುವ ಛತ್ತೀಸ್‍ಗಢ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಅಣಕ, ಆರೆಸ್ಸೆಸ್ ಶ್ಲಾಘನೆ !

Update: 2020-07-10 05:12 GMT
ಸಿಎಂ ಭೂಪೇಶ್ ಬಘೇಲ್

ಹೊಸದಿಲ್ಲಿ: ರೈತರಿಂದ ಸೆಗಣಿ ಖರೀದಿಸಲು ಮುಂದಾಗಿರುವ ಛತ್ತೀಸ್‍ಗಢದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾಗತಿಸಿದೆ. ಆದರೆ ಭೂಪೇಶ್ ಬಘೇಲ್ ಸರ್ಕಾರದ ಈ ಕ್ರಮವನ್ನು ಬಿಜೆಪಿ ಅಣಕಿಸಿದೆ.

ಈ ತಿಂಗಳ 21ರಂದು ಆರಂಭವಾಗಲಿರುವ ಗೋಧನ ನ್ಯಾಯ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಪ್ರತಿ ಕೆ.ಜಿ.ಗೆ 1.50 ರೂಪಾಯಿ ದರದಲ್ಲಿ ಸೆಗಣಿ ಖರೀದಿಸಲಿದೆ. ಇದರಿಂದ ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸುವುದು ಸರ್ಕಾರದ ಯೋಜನೆ.

ಸರ್ಕಾರದ ಕ್ರಮವನ್ನು ಟೀಕಿಸಿರುವ ಬಿಜೆಪಿ, ಸುಶಿಕ್ಷಿತ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ನೆರವಾಗುವ ಬದಲು ಅವರಿಂದ ಸರ್ಕಾರ ಬಲವಂತವಾಗಿ ಸೆಗಣಿ ಹೆಕ್ಕಿಸಲು ಮುಂದಾಗಿದೆ ಎಂದು ಹೇಳಿದೆ. ಈ ಯೋಜನೆಯನ್ನು ಅಣಕಿಸುವ ಹಾಡೊಂದನ್ನು ಬಿಜೆಪಿಯ ಮಾಜಿ ಸಚಿವ ಅಜಯ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಆದರೆ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿ ಆರೆಸ್ಸೆಸ್‍ನ ಪ್ರಾದೇಶಿಕ ಸಂಯೋಜಕ ಬಿಸ್ರಾರಾಮ್ ಯಾದವ್ ನೇತೃತ್ವದ ಮುಖಂಡರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಘೇಲ್ ಅವರನ್ನು ಜನಪ್ರಿಯ ಮುಖ್ಯಮಂತ್ರಿ ಎಂದು ಕರೆದಿರುವ ಮುಖಂಡರು, ಈ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇತರ ಕೆಲ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ.

“ಸೆಗಣಿ ಹಾಗೂ ಗೋಮೂತ್ರದಿಂದ ಗೊಬ್ಬರ ಉತ್ಪಾದಿಸುವ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಗೋಮೂತ್ರ ಖರೀದಿಸಲು ನಾವು ಸರ್ಕಾರವನ್ನು ಒತ್ತಾಯಿಸಿದ್ದೆವು. ಜತೆಗೆ ಗೊಬ್ಬರ ತಯಾರಿಕೆ ಬಗ್ಗೆ ರೈತರಿಗೆ ತರಬೇತಿ ನೀಡಿ ನೆರವು ನೀಡುವಂತೆ ಮತ್ತು ಹಟ್ಟಿಗಳ ನಿರ್ಮಾಣಕ್ಕೆ ನೆರವಾಗುವಂತೆ ಒತ್ತಾಯಿಸಿದ್ದೆವು” ಎಂದು ಆರೆಸ್ಸೆಸ್ ಕಾರ್ಯಕರ್ತ ಸಾಹು ವಿವರಿಸಿದ್ದಾರೆ.

ನಮ್ಮ ಬೇಡಿಕೆಗಳನ್ನು ಸರ್ಕಾರ ಭಾಗಶಃ ಈಡೇರಿಸಿದ್ದರಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಮತ್ತು ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಆರೆಸ್ಸೆಸ್ ಗೋಗ್ರಾಮ ಸ್ವಾವಲಂಬನ ಅಭಿಯಾನದ ಪ್ರಾಂತ ಪ್ರಮುಖ ಸುಬೋಧ್ ರಾಠಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News