ಪಲ್ಸ್ ಆಕ್ಸಿಮೀಟರ್

Update: 2020-07-10 19:30 GMT

ಪಲ್ಸ್ ಆಕ್ಸಿಮೀಟರ್ ಎನ್ನುವುದು ಬ್ಯಾಟರಿ ಚಾಲಿತ ಚಿಕ್ಕ ಯಂತ್ರವಾಗಿದ್ದು, ದೇಹದಲ್ಲಿ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪತ್ತೆ ಮಾಡುವ ಉಪಕರಣವಾಗಿರುತ್ತದೆ. ಗಾತ್ರದಲ್ಲಿ ಒಂದು ಬೆಂಕಿಪೊಟ್ಟಣದಂತೆ ಕಾಣುವ ಈ ಯಂತ್ರ ಕೇವಲ 100 ಗ್ರಾಂನಷ್ಟಿದ್ದು, ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್-19 ರೋಗ ಸಾಂಕ್ರಾಮಿಕವಾಗಿ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿರುವ ಕಾರಣದಿಂದ ಈ ಯಂತ್ರಕ್ಕೆ ಈಗ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಬೇಡಿಕೆ ಕಂಡು ಬಂದಿದೆ. ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುವ ಕೋವಿಡ್-19 ರೋಗದಲ್ಲಿ ದೇಹದಲ್ಲಿನ-ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿಯುವುದನ್ನು ತಕ್ಷಣವೇ ಪತ್ತೆ ಹಚ್ಚಲು ಸಾಮಾನ್ಯ ಜನರಿಗೂ ಈ ಯಂತ್ರ ಬಹಳ ಉಪಯುಕ್ತ ಎನ್ನಲಾಗುತ್ತಿದೆ. ಪ್ರತಿ ಮನೆಮನೆಯಲ್ಲೂ ಈ ಉಪಕರಣ ಇಟ್ಟುಕೊಳ್ಳಬಹುದಾಗಿದ್ದು, ಸಾಮಾನ್ಯ ಜನರೂ ಈ ಸಾಧನವನ್ನು ಬಹಳ ಸುಲಭವಾಗಿ ಬಳಸಬಹುದಾಗಿದೆ. ಬೆರಳ ತುದಿಗೆ ಈ ಉಪಕರಣವನ್ನು ಜೋಡಿಸಿ ಕೇವಲ ಎರಡು ನಿಮಿಷದ ಒಳಗೆ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಪತ್ತೆಹಚ್ಚಬಹುದಾಗಿದೆ.

 ನಮ್ಮ ದೇಹದಲ್ಲಿ ಸುಮಾರು 5ರಿಂದ 6ಲೀಟರ್‌ಗಳಷ್ಟು ರಕ್ತವಿದ್ದು, ಹೃದಯದ ನಿರಂತರ ಕಾರ್ಯಚಟುವಟಿಕೆಯಿಂದಾಗಿ ರಕ್ತ ಯಾವತ್ತೂ ರಕ್ತನಾಳಗಳಲ್ಲಿ ಚಲನೆಯಲ್ಲಿರುತ್ತದೆ. ಈ ಚಲನೆಯಲ್ಲಿರುವ ರಕ್ತದ ಮುಖಾಂತರ ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೆ, ಜೀವಕೋಶಗಳಿಗೆ ನಿರಂತರವಾಗಿ ಆಕ್ಸಿಜನ್ ಮತ್ತು ಇತರ ಪೋಷಕಾಂಶಗಳು ಸರಬರಾಜು ಆಗುತ್ತಿರುತ್ತವೆ. ಜೀವಕೋಶಗಳಿಗೆ ಆಮ್ಲಜನಕ ಕಡಿಮೆಯಾಗುವುದನ್ನು ವೈಜ್ಞಾನಿಕವಾಗಿ ಹೈಪೋಕ್ಸಿಯಾ ಎನ್ನಲಾಗುತ್ತದೆ, ಜೀವಕೋಶಗಳಿಗೆ ಗ್ಲುಕೋಸ್ ಸರಬರಾಜು ಕಡಿಮೆಯಾದಲ್ಲಿ ಹೈಪೊಗ್ಲೈಸೆಮಿಯಾ ಎನ್ನುತ್ತಾರೆ.

ಜೀವಕೋಶಗಳಿಗೆ ಹೈಪೊಗ್ಲೈಸೆಮಿಯಾ ಮತ್ತು ಹೈಪೋಕ್ಸಿಯಾ ಉಂಟಾದಾಗ ಆ ವ್ಯಕ್ತಿಯ ಚರ್ಮ ಬಿಳಿಚಿಕೊಳ್ಳುತ್ತದೆ. ತಕ್ಷಣವೇ ಆಮ್ಲಜನಕ ನೀಡದಿದ್ದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ನಮ್ಮ ದೇಹದಲ್ಲಿ ಮೆದುಳು ಅತ್ಯಂತ ಕ್ರಿಯಾಶೀಲವಾಗಿದ್ದು, ನಿರಂತರ ಆಮ್ಲಜನಕ ಪೂರೈಕೆ ಆಗಲೇಬೇಕು. ಮೂರು ನಿಮಿಷಕ್ಕಿಂತ ಜಾಸ್ತಿ ಹೊತ್ತು ರಕ್ತ ಮತ್ತು ಆಮ್ಲಜನಕ ಸಿಗದಿದ್ದಲ್ಲಿ ಮೆದುಳಿಗೆ ಖಾಯಂ ಹಾನಿಯಾಗಬಹುದು ಮತ್ತು ಆ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳಬಹುದು. ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ನಿಮಿಷಕ್ಕೆ ಹೃದಯದಿಂದ 5 ಲೀ. ನಷ್ಟು ರಕ್ತವನ್ನು ನಿರಂತರವಾಗಿ ಹೊರಹಾಕುತ್ತಾನೆ. ಇದರಲ್ಲಿ ಸುಮಾರು 2 ಲೀ. ನಷ್ಟು ನೇರವಾಗಿ ಮೆದುಳಿಗೆ ಸಾಗುತ್ತದೆ. ಇನ್ನುಳಿದ ರಕ್ತ ದೇಹದ ಇತರ ಅಂಗಗಳಾದ ಕಿಡ್ನಿ, ಲಿವರ್, ಶ್ವಾಸಕೋಶಗಳಿಗೆ ಸರಬರಾಜು ಆಗುತ್ತದೆ.

ರಕ್ತದಲ್ಲಿರುವ ಹಿಮೋಗ್ಲೋಬಿನ್ ಎಂಬ ಪ್ರೊಟೀನ್‌ಗೆ ಆಮ್ಲಜನಕ ಸೇರಿಕೊಂಡು ದೇಹದ ಎಲ್ಲಾ ಜೀವಕೋಶಗಳಿಗೆ ನಿರಂತರವಾಗಿ ರಕ್ತದ ಮುಖಾಂತರ ತಲುಪುತ್ತದೆ. ಪ್ರತಿ ನಿಮಿಷಕ್ಕೆ ರಕ್ತದಲ್ಲಿನ ಹಿಮೋಗ್ಲೋಬಿನ್ 1,000 ಮಿ.ಮೀ. ಆಕ್ಸಿಜನ್‌ನ್ನು ಜೀವಕೋಶಗಳಿಗೆ ತಲುಪುವಂತೆ ಮಾಡುತ್ತದೆ. ರಕ್ತದಲ್ಲಿರುವ ಕೆಂಪು ರಕ್ತಕಣಗಳಲ್ಲಿ ಈ ಹಿಮೋಗ್ಲೋಬಿನ್ ಇದ್ದು, ಒಂದು ಹಿಮೋಗ್ಲೋಬಿನ್ ನಾಲ್ಕು ಆಮ್ಲಜನಕ ಕಣಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುತ್ತದೆ. ದೇಹದಲ್ಲಿ ಕಾರಣಾಂತರದಿಂದ ಕೆಂಪು ರಕ್ತಕಣಗಳು ಕಡಿಮೆಯಾದಾಗ ಹಿಮೋಗ್ಲೋಬಿನ್‌ಗಳ ಸಂಖ್ಯೆಯು ಕ್ಷೀಣಿಸಿ ಆ ವ್ಯಕ್ತಿಯ ಆಮ್ಲಜನಕ ಸರಬರಾಜು ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವುದನ್ನು ರಕ್ತಹೀನತೆ ಎನ್ನಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಅನೀಮಿಯ ಎನ್ನುತ್ತಾರೆ. ಆರೋಗ್ಯವಂತ ಪುರುಷರಲ್ಲಿ 14 ರಿಂದ 16 ಜಞ/ಛ್ಝರಷ್ಟು ಹಿಮೋಗ್ಲೋಬಿನ್ ಇರುತ್ತದೆ. ಮಹಿಳೆಯರಲ್ಲಿ 12ರಿಂದ 15 ಜಞ/ಛ್ಝರಷ್ಟು ಇರುತ್ತದೆ. 10ಕ್ಕಿಂತ ಕಡಿಮೆ ಇದ್ದಲ್ಲಿ ಅವರಲ್ಲಿ ಅನೀಮಿಯ ರೋಗ ಕಾಡುತ್ತದೆ ಎಂದು ವಿಂಗಡಿಸಲಾಗುತ್ತದೆ. ಅಂತಹವರಿಗೆ ಸುಸ್ತು, ಆಯಾಸ ಮತ್ತು ಉಸಿರಾಟದ ತೊಂದರೆ ಬಹಳ ಬೇಗನೆ ಕಾಣಿಸಿಕೊಳ್ಳುತ್ತದೆ. ನಮ್ಮ ದೇಹದ ರಕ್ತದಲ್ಲಿನ ಹಿಮೋಗ್ಲೋಬಿನ್, ಆಕ್ಸಿಜನ್ ಅನ್ನು ಶ್ವಾಸಕೋಶದ ಮುಖಾಂತರ ಉಸಿರಾಡುವ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುತ್ತದೆ.

ಕೋವಿಡ್ -19 ರೋಗ ನೇರವಾಗಿ ಶ್ವಾಸಕೋಶಗಳಿಗೆ ದಾಳಿ ಮಾಡುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್‌ಗಳಿಗೆ ಆಮ್ಲಜನಕ ಸಿಗದಂತಾಗಿ, ಉಸಿರಾಟದ ಸಮಸ್ಯೆ ಬಹಳ ಪ್ರಮುಖವಾಗಿ ಕಂಡುಬರುತ್ತದೆ ಮತ್ತು ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಬೇಗನೆ ಕುಸಿಯುತ್ತದೆ. ಒಬ್ಬ ಆರೋಗ್ಯ ವಂತ ಮನುಷ್ಯನ ರಕ್ತದಲ್ಲಿ ಆಮ್ಲ ಜನಕ ಪ್ರಮಾಣ ಶೇ. 95ರಿಂದ 100ರಷ್ಟು ಇರುತ್ತದೆ. ಶೇ. 90ಕ್ಕಿಂತ ಕಡಿಮೆಯಿದ್ದಲ್ಲಿ ಆ ವ್ಯಕ್ತಿಗೆ ತಕ್ಷಣ ವೈದ್ಯರ ಸಲಹೆ ಅವಶ್ಯಕ ಮತ್ತು ಚಿಕಿತ್ಸೆ ಬೇಕಾಗಬಹುದು.

ಕೊನೆಮಾತು
 ಕೋವಿಡ್-19 ವೈರಾಣು ಸೋಂಕು ಪೀಡಿತರು, ಶಂಕಿತರು ಮತ್ತು ಸೋಂಕಿನ ಹೆಚ್ಚು ಅಪಾಯದಲ್ಲಿ ಇರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿರುವ ಸಂದರ್ಭದಲ್ಲಿ ಯಾರಿಗಾದರೂ ಉಸಿರಾಟದ ಸಮಸ್ಯೆ ಮತ್ತು ತೊಂದರೆ ಕಂಡುಬಂದಲ್ಲಿ ಅಂತಹವರ ರಕ್ತದ ಆಮ್ಲಜನಕದ ಪ್ರಮಾಣವನ್ನು ಪತ್ತೆಹಚ್ಚಲು ಈ ಪಲ್ಸ್ ಆಕ್ಸಿಮೀಟರ್ ಬಹಳ ಮುಖ್ಯ. ಆರೋಗ್ಯ ಕಾರ್ಯಕರ್ತರು ಅಥವಾ ಕುಟುಂಬದವರು ಈ ಉಪಕರಣ ಬಳಸಿ ರೋಗಿಯ ಆಮ್ಲಜನಕದ ಪ್ರಮಾಣ ತಿಳಿದು, ತುಲನೆ ಮಾಡಿ ಅಗತ್ಯವಿದ್ದಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲು ಈ ಉಪಕರಣ ಸಹಾಯ ಮಾಡುತ್ತದೆ. ಕೆಲವೇ ಕ್ಷಣಗಳಲ್ಲಿ ರೋಗಿಯ ಉಸಿರಾಟದ ತೊಂದರೆಯ ತೀವ್ರತೆಯನ್ನು ಪತ್ತೆ ಹಚ್ಚುವ ಕಾರಣದಿಂದಾಗಿ ಈ ಉಪಕರಣವನ್ನು ಎಲ್ಲರೂ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



ಬಳಸುವುದು ಹೇಗೆ?

ಪಲ್ಸ್ ಆಕ್ಸಿಮೀಟರ್ ಎನ್ನುವುದು ಬಹಳ ಸರಳ ಯಂತ್ರವಾಗಿದ್ದು, ಎಲ್ಲರೂ ಸುಲಭವಾಗಿ ಬಳಸಬಹುದಾಗಿದೆ. ದೇಹದ ಮೇಲ್ಮೈಯಲ್ಲಿ ಇರುವ ರಕ್ತನಾಳಗಳಲ್ಲಿನ ಆಮ್ಲಜನಕದ ಪ್ರಮಾಣದ ಬಗ್ಗೆ ನಿಖರ ಮಾಹಿತಿ ನೀಡುವ ಈ ಇಲೆಕ್ಟ್ರಾನಿಕ್ ಉಪಕರಣ ಎಲ್ಲ ವೈದ್ಯಕೀಯ ಸಾಧನಗಳ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಆಮ್ಲಜನಕದ ಪ್ರಮಾಣ ತಿಳಿಯಬೇಕಾದ ವ್ಯಕ್ತಿಯ ಬಲಗೈಯ ಮಧ್ಯದ ಬೆರಳಿನ ತುದಿಗೆ ಈ ಉಪಕರಣವನ್ನು ಜೋಡಿಸಲಾಗುತ್ತದೆ. ಒಂದೆರಡು ನಿಮಿಷದಲ್ಲಿ ಈ ಆಕ್ಸಿಮೀಟರ್‌ನ ಡಿಜಿಟಲ್ ಪರದೆಯಲ್ಲಿ ಆ ವ್ಯಕ್ತಿಯ ಆಮ್ಲಜನಕ ಪ್ರಮಾಣ ತಿಳಿದುಬರುತ್ತದೆ. ಈ ಸಾಧನ ಬಳಸುವಾಗ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ. ರಕ್ತವನ್ನು ಸೂಜಿಯಿಂದ ತೆಗೆಯುವುದೂ ಇಲ್ಲ. ಈ ಯಂತ್ರವು ಚರ್ಮದ ಮೂಲಕ ಪ್ರಕಾಶಮಾನವಾದ ಬೆಳಕು ಚೆಲ್ಲಿ ಅದರ ಮುಖಾಂತರ ರಕ್ತದ ಚಲನೆ ಹಾಗೂ ಅದರ ಬಣ್ಣವನ್ನು ತುಲನೆ ಮಾಡಿ ರಕ್ತದಲ್ಲಿನ ಆಮ್ಲಜನಕದ ಶೇಕಡಾವಾರು ಪ್ರಮಾಣವನ್ನು ಅತ್ಯಂತ ಕರಾರುವಕ್ಕಾಗಿ ನೀಡುತ್ತದೆ. ಬಹಳ ಸುಲಭವಾಗಿ ಬಳಸಬಹುದಾದ ಉಪಕರಣ ಇದಾಗಿದ್ದು, ಮಕ್ಕಳು, ವೃದ್ಧರು ಹಾಗೂ ಎಲ್ಲರೂ ಬಳಸಬಹುದಾಗಿದೆ. ನೇರವಾಗಿ ಪರದೆ ಮೇಲೆ ಆಮ್ಲಜನಕ ಪ್ರಮಾಣ ಕಂಡು ಬರುತ್ತದೆ.

ಈ ಉಪಕರಣದಲ್ಲಿ ಆಮ್ಲಜನಕದ ಸಾಂದ್ರತೆ ಅಲ್ಲದೆ, ನಾಡಿಬಡಿತ ಮತ್ತು ಉಸಿರಾಟದ ವೇಗ ಕೂಡಾ ಡಿಜಿಟಲ್ ಪರದೆ ಮೇಲೆ ಕಂಡು ಬರುತ್ತದೆ. ಇದು ಎಲ್ಲಾ ಆಸ್ಪತ್ರೆಗಳ ಒಪಿಡಿಗಳಲ್ಲಿ ಮತ್ತು ಮನೆಗಳಲ್ಲೂ ಬಳಸಬಹುದಾದ ಸರಳ ಮತ್ತು ಕಡಿಮೆ ವೆಚ್ಚದ ಯಂತ್ರವಾಗಿರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 1,500 ರೂ.ಯಿಂದ 4,000 ರೂ. ವರೆಗೆ ಇದೆ.


ರಕ್ತದಲ್ಲಿ ಆಮ್ಲಜನಕ ಪ್ರಮಾಣ ಯಾವಾಗ ಕಡಿಮೆಯಾಗುತ್ತದೆ?

* ಹೃದಯಾಘಾತ ಅಥವಾ ಹೃದಯದ ವೈಫಲ್ಯ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ.

* ಅಸ್ತಮಾ, ಸಿಒಪಿಡಿ ಮುಂತಾದ ಶ್ವಾಸಕೋಶ ಸಂಬಂಧಿ ರೋಗ ಇರುವವರಲ್ಲಿ.

 * ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕು ತಗಲಿ ಶ್ವಾಸಕೋಶಕ್ಕೆ ನ್ಯುಮೋನಿಯಾ ಸೋಂಕು ಉಂಟಾದಾಗ

* ರಕ್ತಹೀನತೆ ಅಥವಾ ಅನೀಮಿಯ ರೋಗಿಗಳಲ್ಲಿ.

* ಕೋವಿಡ್-19 ರೋಗ ಮುಂದುವರಿದ ಹಂತದಲ್ಲಿ.

Writer - ಡಾ. ಮುರಲೀಮೋಹನ ಚೂಂತಾರು

contributor

Editor - ಡಾ. ಮುರಲೀಮೋಹನ ಚೂಂತಾರು

contributor

Similar News