2021ರ ಮೊದಲು ಕೊರೋನಕ್ಕೆ ಲಸಿಕೆ ಅಸಾಧ್ಯ: ಅಧಿಕಾರಿಗಳ ಹೇಳಿಕೆ

Update: 2020-07-10 18:12 GMT

ಹೊಸದಿಲ್ಲಿ, ಜು.10: ಕನಿಷ್ಟ ಮುಂದಿನ ವರ್ಷದವರೆಗೆ ಕೊರೋನ ಸೋಂಕಿಗೆ ಲಸಿಕೆ ಲಭ್ಯವಾಗದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಗೆ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

 ಆಗಸ್ಟ್ 15ರೊಳಗೆ ಕೊರೋನ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವಂತೆ ಈ ತಿಂಗಳ ಆರಂಭದಲ್ಲಿ ಸಂಶೋಧಕರಿಗೆ ರವಾನಿಸಿದ್ದ ಸೂಚನಾ ಪತ್ರದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ತಿಳಿಸಿತ್ತು. ಈ ಬಗ್ಗೆ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದರೆ, ಇದು ಮೋದಿ ಸರಕಾರಕ್ಕೆ ರಾಜಕೀಯ ಲಾಭ ಗಳಿಸಿಕೊಡುವ ನಡೆಯಾಗಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಐಸಿಎಂಆರ್, ಅನಗತ್ಯ ವಿಳಂಬವನ್ನು ತಪ್ಪಿಸಲು ಮತ್ತು ಸಂಶೋಧನಾ ಪ್ರಕ್ರಿಯೆ ತ್ವರಿತಗೊಳಿಸುವ ಉದ್ದೇಶದಿಂದ ಈ ಸೂಚನೆ ನೀಡಿರುವುದಾಗಿ ತಿಳಿಸಿತ್ತು. ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಬಯೊಟೆಕ್ನಾಲಜಿ (ಜೈವಿಕ ತಂತ್ರಜ್ಞಾನ) ಇಲಾಖೆ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಇಲಾಖೆ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಮಿತಿಯ ಹಿರಿಯ ಅಧಿಕಾರಿಗಳು, ಸರಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ಮಾಹಿತಿ ನೀಡಿದರು.

ಯೋಗ ಶಿಕ್ಷಕ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಸ್ವಾಸರಿ ಕೊರೊನಿಲ್ ಕಿಟ್ ನ ಪರಿಣಾಮಕಾರಿತ್ವದ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಪ್ರಶ್ನಿಸಿದರು ಎಂದು ವರದಿಯಾಗಿದೆ. ಭಾರತದಲ್ಲಿ ಅಭಿವೃದ್ಧಿಗೊಳಿಸಿರುವ ಕೊರೋನ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಪರೀಕ್ಷೆ ಸೋಮವಾರದಿಂದ ಆರಂಭವಾಗಲಿದೆ. ವಿಶ್ವದಲ್ಲಿ ಕೊರೋನ ವಿರುದ್ಧ ಅಭಿವೃದ್ಧಿಗೊಳಿಸಿರುವ 140 ಲಸಿಕೆಗಳಲ್ಲಿ 11 ಮನುಷ್ಯರ ಮೇಲಿನ ಪ್ರಯೋಗದ ಹಂತದಲ್ಲಿದ್ದರೂ, ಇದರಲ್ಲಿ ಯಾವುದೂ ಕೂಡಾ 2021ರ ಮೊದಲು ಜನತೆಯ ಉಪಯೋಗಕ್ಕೆ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಕಳೆದ ವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News