ಸಮನ್ಸ್, ನೋಟಿಸ್ ನೀಡಲು ವಾಟ್ಸಾಪ್, ಇ-ಮೇಲ್ ಬಳಸಬಹುದು: ಸುಪ್ರೀಂ ಕೋರ್ಟ್

Update: 2020-07-10 16:56 GMT

ಹೊಸದಿಲ್ಲಿ, ಜು.10: ಕೊರೋನ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಮನ್ಸ್ ಹಾಗೂ ನೋಟಿಸ್ ಗಳನ್ನು ಇ-ಮೇಲ್, ಫ್ಯಾಕ್ಸ್, ವಾಟ್ಸಾಪ್ ಮೂಲಕವೂ ರವಾನಿಸಬಹುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

 ನೋಟಿಸ್, ಸಮನ್ಸ್ ಅಥವಾ ಕೈಫಿಯತು(ಪ್ರತಿವಾದ)ಗಳನ್ನು ರವಾನಿಸಲು ಅಂಚೆಕಚೇರಿಗೆ ತೆರಳಲು ಕಷ್ಟ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಇಂತಹ ಸೇವೆಗಳನ್ನು ವಾಟ್ಸಾಪ್, ಇ-ಮೇಲ್, ಫ್ಯಾಕ್ಸ್ ಬಳಸಿ ನಿರ್ವಹಿಸಬಹುದು. ಸ್ವೀಕರಿಸುವವರು ನೋಟಿಸನ್ನು ಗಮನಿಸಿದರೆ ಎರಡು ನೀಲಿ ಗುರುತುಗಳು ಮೂಡುತ್ತವೆ ಎಂದು ನ್ಯಾಯಾಧೀಶರಾದ ಎಎಸ್ ಬೋಪಣ್ಣ ಮತ್ತು ಆರ್ಎಸ್ ರೆಡ್ಡಿಯವರಿದ್ದ ನ್ಯಾಯಪೀಠ ಹೇಳಿದೆ.

ಹೈಕೋರ್ಟ್ ಗಳಲ್ಲಿ ಮತ್ತು ಟ್ರಿಬ್ಯೂನಲ್ ಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಲಯದ ಅವಧಿಯನ್ನು ಮೀರಿಯೂ ವಕೀಲರಿಗೆ ಅರ್ಜಿ ದಾಖಲಿಸಲು ಅವಕಾಶ ನೀಡುವ ಇ-ಫೈಲಿಂಗ್ ವ್ಯವಸ್ಥೆಗೆ ಕಳೆದ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು. ಭವಿಷ್ಯದಲ್ಲಿ ಕೃತಕ ಬುದ್ಧಿವಂತಿಕೆ ವ್ಯವಸ್ಥೆಯು ಪ್ರಕರಣಗಳ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕೃತಕ ಬುದ್ಧಿವಂತಿಕೆ ವ್ಯವಸ್ಥೆಯನ್ನು ಈ ಹಿಂದೆಯೇ ಸರಿಯಾಗಿ ಬಳಸಿದ್ದರೆ ಅಯೋಧ್ಯೆ ಪ್ರಕರಣ ವಿಳಂಬವಿಲ್ಲದೆ ಎಂದೋ ಇತ್ಯರ್ಥವಾಗುತ್ತಿತ್ತು ಎಂದು ಸಿಜೆಐ ಎಸ್ಎ ಬೋಬ್ಡೆ ಅಭಿಪ್ರಾಯಪಟ್ಟಿದ್ದರು.

 ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಿನಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶರು ತಮ್ಮ ಮನೆಯಿಂದಲೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ತಮ್ಮ ಕಪ್ಪು ಕೋಟು ಮತ್ತು ಗೌನ್ ಗಳ ಬದಲು ಕೊರಳಪಟ್ಟಿ ಇರುವ ಬಳಿ ಅಂಗಿ ಧರಿಸುವಂತೆ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News