ಐಸಿಎಸ್ಇ, ಐಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ

Update: 2020-07-10 18:05 GMT

ಹೊಸದಿಲ್ಲಿ: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಸಿಎಸ್ಇ), ಶುಕ್ರವಾರ 10 ಮತ್ತು 12ನೇ ತರಗತಿಗಳ ಫಲಿತಾಂಶವನ್ನು ಪ್ರಕಟಿಸಿದೆ. ಫಲಿತಾಂಶವನ್ನು ವೆಬ್ಸೈಟ್: www.cisce.org ಮೂಲಕ ನೋಡಬಹುದು.

10ನೇ ತರಗತಿಯಲ್ಲಿ ಶೇಕಡ 99.34ರಷ್ಟು ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ 96.84% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ ಈ ವರ್ಷ ಅತಿಹೆಚ್ಚು ಅಂಕ ಗಳಿಸಿದವರ ಪಟ್ಟಿಯನ್ನು ಪ್ರಕಟಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟನೆ ನೀಡಿದೆ.

“ವಿಶೇಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಿಐಎಸ್ಇ ಈ ಬಾರಿ ಐಸಿಎಸ್ಇ ಅಥವಾ ಐಎಸ್ಸಿ ಪರೀಕ್ಷೆಗಳ ಪ್ರತಿಭಾವಂತರ ಪಟ್ಟಿಯನ್ನು ಪ್ರಕಟಿಸುತ್ತಿಲ್ಲ” ಎಂದು ಪ್ರಕಟಣೆ ಹೇಳಿದೆ. ಕೊರೋನ ವೈರಸ್ ಸೋಂಕಿನ ಕಾರಣದಿಂದಾಗಿ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಐಸಿಎಸ್ಸಿಯ ಅರು ಪತ್ರಿಕೆಗಳು ಮತ್ತು ಐಎಸ್ಸಿಯ ಎಂಟು ಪತ್ರಿಕೆಗಳಿಗೆ ಪರೀಕ್ಷೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ರದ್ದತಿಯಾದ ವಿಷಯಗಳಿಗೆ ಹೊಸ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.

ಮೂರು ವಿಷಯಗಳ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದ ಗರಿಷ್ಠ ಅಂಕವನ್ನು ಉಳಿದ ವಿಷಯಗಳಿಗೆ ಕೂಡಾ ಪರಿಗಣಿಸಲಾಗಿದೆ. ಜತೆಗೆ ಪ್ರಾಜೆಕ್ಟ್ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳನ್ನು ನೀಡಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.

ಸರ್ಕಾರದ ಡಿಜಿಲಾಕರ್ ಸೌಲಭ್ಯದ ಮೂಲಕ ಉತ್ತೀರ್ಣತೆ ಪ್ರಮಾಣಪತ್ರ ಮತ್ತು ಅಂಕಪಟ್ಟಿಯನ್ನು ಕಳುಹಿಸಲಿದೆ. ಫಲಿತಾಂಶ ಪ್ರಕಟವಾದ 48 ಗಂಟೆಗಳ ಬಳಿಕ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರ ಮತ್ತು ಅಂಕಪಟ್ಟಿ ಲಭ್ಯ ಎಂದು ಪ್ರಕಟಣೆ ಹೇಳಿದೆ.

ಕಳೆದ ವರ್ಷ ಐಸಿಎಸ್ಇ ಪರೀಕ್ಷೆಯಲ್ಲಿ 98.54% ಮತ್ತು ಐಎಸ್ಸಿಯಲ್ಲಿ 96.52% ಫಲಿತಾಂಶ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News