‘ದ ಕಾಶ್ಮೀರ್ ವಲ್ಲಾ’ ಪತ್ರಿಕೆ ಸಂಪಾದಕರಿಗೆ ಮತ್ತೆ ಸಮನ್ಸ್

Update: 2020-07-10 18:29 GMT

ಶ್ರೀನಗರ: ಶ್ರೀನಗರದ ಡೌನ್ಟೌನ್ ಬಳಿಯ ನವಾಕಡಲ್ ನಲ್ಲಿ ಮೇ 19ರಂದು ನಡೆದ ಗುಂಡಿನ ಚಕಮಕಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸಿದ ಕಾರಣವನ್ನು ಪ್ರಶ್ನಿಸಲು ಶ್ರೀನಗರ ಪೊಲೀಸರು ಕಾಶ್ಮೀರ್ ವಲ್ಲಾ ಪತ್ರಿಕೆಯ ಸಂಪಾದಕ ಫಹಾದ್ ಶಾ ಅವರಿಗೆ ಸಮನ್ಸ್ ನೀಡಿದ್ದಾರೆ.

ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರು ಹಾಗೂ ಹಲವು ಮನೆಗಳು ಧ್ವಂಸವಾಗಿದ್ದವು. ಈ ಘಟನೆಯ ಸಂಬಂಧ ಶಾ ಅವರನ್ನು ವಿಚಾರಣೆಗೆ ಗುರಿಪಡಿಸಿರುವುದು ಇದು ಎರಡನೇ ಬಾರಿ.

ಹೊಸ ಸಮನ್ಸ್ ನೀಡಿರುವ ಪೊಲೀಸರ ಕ್ರಮವನ್ನು ಪತ್ರಿಕೆ ಖಂಡಿಸಿದ್ದು, “ಪತ್ರಿಕೋದ್ಯಮ ಅಪರಾಧವಲ್ಲ” ಎಂದು ಹೇಳಿದೆ.

“ಕಾಶ್ಮೀರ್ ವಲ್ಲಾ ಸಂಪಾದಕರಿಗೆ 2020ರ ಜುಲೈ 9ರಂದು ಸಫಾಕಡಲ್ ಪೊಲೀಸ್ ಠಾಣೆಯಿಂದ ಔಪಚಾರಿಕ ಸಮನ್ಸ್ ಬಂದಿದ್ದು, “ಭಾರತೀಯ ದಂಡಸಂಹಿತೆಯ ಸೆಕ್ಷನ್ 147, 307, 109, 501, 505ರ ಅನ್ವಯ ಎಸಗಿರುವ ಅಪರಾಧದ ಸಂಬಂಧ ವಿಚಾರಣೆ ನಡೆಸಲು ನಿಮ್ಮ ಉಪಸ್ಥಿತಿ ಅಗತ್ಯ” ಎಂಬ ಒಕ್ಕಣೆ ಇದೆ ಎಂದು ಪತ್ರಿಕೆ ಹೇಳಿದೆ.

ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪೊಲೀಸರನ್ನು ಅವಮಾನಿಸಿದೆ ಎಂದು ಮೇ 20ರಂದು ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಹೇಳಿದ್ದರು. ಆದರೆ ಇದು ನಿರ್ವಿವಾದವಾಗಿ ಸತ್ಯಾಂಶವನ್ನು ಒಳಗೊಂಡಿದೆ; ಪ್ರತ್ಯಕ್ಷದರ್ಶಿಗಳ ಹೇಳಿಕೆ, ನಾಗರಿಕರ ಸಂದರ್ಶನದ ಅಂಶಗಳನ್ನು ಮತ್ತು ಪೊಲೀಸರ ಹೇಳಿಕೆಯನ್ನು ಒಳಗೊಂಡಿದೆ” ಎಂದು ಶಾ ಸಮರ್ಥಿಸಿಕೊಂಡಿದ್ದರು. ನಾಲ್ಕು ಗಂಟೆ ವಿಚಾರಣೆ ನಡೆಸಿದ ಬಳಿಕ ಅವರನ್ನು ಕಳುಹಿಸಲಾಗಿತ್ತು.

ಪೊಲೀಸರ ಕ್ರಮವನ್ನು, ಪತ್ರಕರ್ತರ ಮೇಲೆ ಪ್ರಹಾರ ನಡೆಸುವ ಮತ್ತು ಪತ್ರಕರ್ತರ ಸದ್ದಡಗಿಸುವ ಪ್ರಯತ್ನ ಎಂದು ಪತ್ರಿಕೆ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News