ಜೀವನದಲ್ಲಿ ಕಷ್ಟಗಳನ್ನು ಓವರ್ ಟೇಕ್ ಮಾಡಿ ಮುನ್ನುಗ್ಗಬೇಕು: ಶಿವರಾಜ್ ಕುಮಾರ್

Update: 2020-07-11 19:30 GMT

ಆ್ಯಕ್ಷನ್ ದೃಶ್ಯಗಳಿರಲಿ, ಸೆಂಟಿಮೆಂಟ್ ಸನ್ನಿವೇಶ ಇರಲಿ ಅಥವಾ ಒಂದು ಹುಚ್ಚೆಬ್ಬಿಸಬಲ್ಲ ಕುಣಿತವಿರಲಿ ಎಲ್ಲ ಕಡೆಯೂ ಸಲ್ಲುವ ಒಬ್ಬ ನಾಯಕ ಕನ್ನಡದಲ್ಲಿದ್ದರೆ ಅದು ಶಿವರಾಜ್ ಕುಮಾರ್ ಅವರು ಮಾತ್ರ. ಅದು ಇವತ್ತಿನ ವಿಚಾರವಲ್ಲ, ಅವರು ಚಿತ್ರರಂಗ ಪ್ರವೇಶಿಸಿದ ದಿನಗಳಿಂದಲೂ ಸಾಬೀತು ಮಾಡಿರುವ ಸಂಗತಿ. ಹಾಗಾಗಿಯೇ ಡಾ. ರಾಜ್ ಪುತ್ರ ಎನ್ನುವುದರ ಜತೆಯಲ್ಲೇ ತಮ್ಮದೇ ಸಿಂಹಾಸನ ಮಾಡಿಕೊಂಡು ಮೂರು ದಶಕಗಳಿಂದ ಚಂದನವನದ ಚಕ್ರವರ್ತಿಯಾಗಿ ಉಳಿಯಲು ಅವರಿಂದ ಸಾಧ್ಯವಾಗಿದೆ. ಇಂದು ಅವರಿಗೆ 58ನೇ ಜನ್ಮದಿನಾಚರಣೆ. ಶಿವರಾಜ್ ಕುಮಾರ್ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ. 


* ಈ ಬಾರಿಯ ಜನ್ಮದಿನದಂದು ಎಲ್ಲಿರುತ್ತೀರಿ?

 ಶಿವರಾಜ್ ಕುಮಾರ್: ನಾನು ಮನೆಯಲ್ಲಂತೂ ಇರಬಾರದು ಎಂದು ಯೋಜನೆ ಹಾಕಿದ್ದೇನೆ. ಯಾಕೆಂದರೆ ಪ್ರತಿ ವರ್ಷ ಅಭಿಮಾನಿಗಳು ಮನೆ ಮುಂದೆ ಬರುತ್ತಾರೆ. ಕಳೆದ ವರ್ಷ ಕೈ ಸರ್ಜರಿ ಆಗಿದ್ದ ಕಾರಣ ಭೇಟಿಯಾಗಿರಲಿಲ್ಲ. ಆದ ಕಾರಣ ಈ ವರ್ಷ ಕೊರೋನ ಅಂತ ಕೂಡ ನೋಡದೆ ಅವರೆಲ್ಲ ಮನೆ ಮುಂದೆ ಬರುವುದು ಗ್ಯಾರಂಟಿ. ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಅದು ನನಗೂ, ಅವರಿಗೂ ಆತಂಕ ತರೋ ವಿಷಯ. ಹಾಗಂತ ನಾನು ಮನೆಯಲ್ಲೇ ಇದ್ದು ಅವರನ್ನು ದೂರ ಮಾಡುವುದಕ್ಕೂ ಸಾಧ್ಯವಿಲ್ಲ. ಅದಕ್ಕಾಗಿಯೇ ಮನೆಯಲ್ಲಿರುವುದು ಬೇಡ ಎಂದು ತೀರ್ಮಾನ ಮಾಡಿದ್ದೇನೆ. ಆದರೆ ನಿಜ ಹೇಳಬೇಕೆಂದರೆ ಎಲ್ಲಿ ಹೋಗುವುದೆಂದು ಈ ಕ್ಷಣದ ತನಕ ನನಗೂ ಗೊತ್ತಿಲ್ಲ! ಜತೆಗೆ ಕೊರೋನದಿಂದ ಉಂಟಾಗುತ್ತಿರುವ ಸಾವು ನೋವುಗಳನ್ನು ಕಂಡಾಗ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಸಂದರ್ಭವೂ ಇದಲ್ಲ.


*ಮಗಳ ಬರ್ತ್ ಡೇ ಕೂಡ ಇದೇ ವಾರದಲ್ಲೇ ಇತ್ತಲ್ಲವೇ?

ಶಿವರಾಜ್ ಕುಮಾರ್: ಹೌದು. ಅದನ್ನೆಲ್ಲ ನಾವು ಮನೆಯಲ್ಲೇ ಚಿಕ್ಕದಾಗಿ ಮಾಡುತ್ತೇವೆ. ಈ ವರ್ಷ ರಾಘು ಹಾರೈಕೆ ಒಂದಷ್ಟು ವೈರಲಾಯಿತು ಬಿಟ್ಟರೆ, ಆಚರಣೆ ಸರಳವಾಗಿಯೇ ಮಾಡಿದೆವು. ದೇವರ ದಯೆಯಿಂದ ಎಲ್ಲವೂ ಚೆನ್ನಾಗಾಯಿತು. ಎಲ್ಲರೂ ಚೆನ್ನಾಗಿದ್ದೇವೆ.


*ಈ ವರ್ಷವನ್ನೇ ನೆಗೆಟಿವ್ ಎಂದು ಹೇಳುವ ಬಗ್ಗೆ ನಿಮ್ಮ ಅನಿಸಿಕೆ ಏನು?
ಶಿವರಾಜ್ ಕುಮಾರ್: ಇದರಲ್ಲಿ ಯಾರನ್ನೂ ದೂಷಿಸಬಾರದು. ನಾವು ಎದುರಿಸಬೇಕು ಅಷ್ಟೇ. ದೈಹಿಕ ಅಂತರ, ಸ್ಯಾನಿಟೈಸ್ ಮಾಡಿಕೊಂಡು ಎಚ್ಚರಿಕೆಯಲ್ಲಿದ್ದರೆ, ನಾವು ಅರ್ಧಕ್ಕರ್ಧ ಸೇಫ್ ಆದ ಹಾಗೆಯೇ. ಕೊರೋನ ಪ್ರಾಕೃತಿಕವಾಗಿ ಹರಡುತ್ತಿದೆ. ಯಾರು ಕೂಡ ಬೇಕೆಂದೇ ಹರಡುತ್ತಿಲ್ಲ. ಕೆಲವು ಮಾಧ್ಯಮಗಳು ತೋರಿಸುವಷ್ಟು ಭೀಕರವಾಗಿಯೂ ಇಲ್ಲ. ಒಂದು ವೇಳೆ ಏನೇ ಇದ್ದರೂ ನಾವು ಎದುರಿಸಬೇಕು. ಎಲ್ಲರ ಬದುಕಲ್ಲಿಯೂ ಕಷ್ಟದ ಸನ್ನಿವೇಶಗಳು ಬರುತ್ತವೆ. ಈ ಬಾರಿ ಎಲ್ಲರಿಗೂ ಒಂದೇ ಸಮಯದಲ್ಲಿ ಬಂದಿವೆ. ಅದರಲ್ಲಿಯೂ ಕೊರೋನ ಇರದಿದ್ದರೂ ಕೆಲಸವಿರದೆ ಕಷ್ಟ ಪಡುವ ಕುಟುಂಬಗಳೂ ನಮ್ಮಲ್ಲಿವೆ. ನಾವು ಹೊಂದಾಣಿಕೆ ಮಾಡಿಕೊಂಡು ಜತೆಯಾಗಿ ಎದುರಿಸಬೇಕು ಅಷ್ಟೇ.


* ಆದರೆ ಚಿತ್ರೋದ್ಯಮದವರಲ್ಲಿಯೂ ಆತ್ಮಹತ್ಯೆಯ ಮನಸ್ಥಿತಿ ಹೆಚ್ಚುತ್ತಿದೆಯಲ್ಲ?
ಶಿವರಾಜ್ ಕುಮಾರ್: ಆಗಲೇ ಹೇಳಿದಂತೆ ಕಷ್ಟ ಎಲ್ಲರಿಗೂ ಇರುತ್ತದೆ. ನಾವು ಎದುರಿಸಲು ಸಿದ್ಧರಾಗಿರಬೇಕೇ ಹೊರತು ಸರೆಂಡರ್ ಆಗಬಾರದು. ನಾನಂತೂ ನನ್ನ ವಲಯದಲ್ಲಿ ಯಾವಾಗಲೂ ನನ್ನಿಂದಾದ ಸಹಾಯ ಮಾಡಿದ್ದೇನೆ. ಅದನ್ನು ಯಾವತ್ತೂ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ ಎಂದು ನಿಮಗೂ ಗೊತ್ತು. ಇನ್ನೊಬ್ಬರಿಗೆ ಸಹಾಯ ಮಾಡಬಹುದು, ಧೈರ್ಯ ಹೇಳಬಹುದು ಆದರೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಮತ್ತು ಭರವಸೆ ಮೂಡಿಸಿಕೊಳ್ಳುವುದನ್ನು ಸ್ವತಃ ಅಭ್ಯಾಸ ಮಾಡಿಕೊಳ್ಳಬೇಕು. ಕಷ್ಟಗಳು ನಮಗೆಂದೇ ಬಂದವು. ಅವುಗಳು ನಮ್ಮನ್ನು ದಾಟಲು ಬಿಡಬಾರದು. ನಾವೇ ಅವುಗಳನ್ನು ಓವರ್‌ಟೇಕ್ ಮಾಡಬೇಕು.


*ಪ್ರಸ್ತುತ ಪರಿಸ್ಥಿತಿ ನೋಡಿದರೆ ಚಿತ್ರಮಂದಿರಗಳು ಶಾಶ್ವತವಾಗಿ ಪ್ರಾಮುಖ್ಯತೆ ಕಳೆದುಕೊಳ್ಳುವಂತಿದೆಯಲ್ಲ?
ಶಿವರಾಜ್ ಕುಮಾರ್: ಖಂಡಿತವಾಗಿ ಇಲ್ಲ. ಒಟಿಟಿ ಫ್ಲಾಟ್‌ಫಾರ್ಮ್ ಎನ್ನುವುದು ಒಂದು ಟೆಕ್ನಾಲಜಿ ಅಷ್ಟೇ. ಸದ್ಯದ ಪರಿಸ್ಥಿತಿಯಲ್ಲಿ ಜನ ಅನಿವಾರ್ಯವಾಗಿ ಮೆಚ್ಚಿದ್ದಾರೆ. ಭವಿಷ್ಯದ ಬಗ್ಗೆ ಹೇಳುವುದು ಕಷ್ಟವಾದರೂ, ಥಿಯೇಟರ್‌ಗೆ ಹೋಗಿ ಹೊಸ ಸಿನೆಮಾ ನೋಡುವುದು ಅಂದರೆ ಇಂದಿಗೂ ನಮಗದೊಂದು ರೀತಿ ಪಿಕ್ನಿಕ್ ಇದ್ದ ಹಾಗೆ. ಬರ್ತ್ ಡೇ ಪ್ರಯುಕ್ತ ‘ಭಜರಂಗಿ 2’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ ಎಂದು ಗೊತ್ತಾದಾಗಲೇ ಅದು ಯಾವಾಗ ಥಿಯೇಟರ್‌ಗೆ ಬರುತ್ತೆ ಎಂದು ಕೇಳುವ ಅಭಿಮಾನಿಗಳು ನಮ್ಮಲ್ಲಿದ್ದಾರೆ. ಹಾಗಾಗಿ ಖಂಡಿತವಾಗಿ ಥಿಯೇಟರ್ ಟ್ರೆಂಡ್ ಸದ್ಯದಲ್ಲೇ ಮರಳಬಹುದು ಎನ್ನುವ ನಿರೀಕ್ಷೆ ಇದೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News