ದುಬೆ ಜೊತೆ ಪೊಲೀಸರ ನಂಟು ಆರೋಪ: ತನಿಖೆಗೆ ಸಿಟ್ ನೇಮಕ

Update: 2020-07-11 18:28 GMT

ಲಕ್ನೋ, ಜು.11: ಎನ್ ಕೌಂಟರ್ ಗೆ ಬಲಿಯಾದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಜೊತೆ ನಂಟು ಹೊಂದಿದ್ದಾರೆನ್ನಲಾದ ಕೆಲವು ಸ್ಥಳೀಯ ಪೊಲೀಸರ ಬಗ್ಗೆ ತನಿಖೆ ನಡೆಸಲು ಉತ್ತರಪ್ರದೇಶ ಸರಕಾರವು ಶನಿವಾರ ವಿಶೇಷ ತನಿಖಾ ತಂಡ(ಸಿಟ್)ವನ್ನು ರಚಿಸಿದೆ.

ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಅವರು ಸಿಟ್ ನೇತೃತ್ವ ವಹಿಸಲಿದ್ದಾರೆ. ಹೆಚ್ಚುವರಿ ಮಹಾನಿರ್ದೇಶಕ ಹರಿರಾಮ್ ಶರ್ಮಾ ಹಾಗೂ ಡಿಐಜಿ ರವಿಂದರ್ ಗೌಡ್ ಸದಸ್ಯರಾಗಿರುವರು ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಪ್ರಕರಣವನ್ನು ಎಲ್ಲಾ ದೃಷ್ಟಿಕೋನಗಳಲ್ಲಿ ಪರಿಶೀಲಿಸಿದ ಬಳಿಕ ಸಿಟ್ ತನ್ನ ವರದಿಯನ್ನು ಜುಲೈ 31ರೊಳಗೆ ಸಲ್ಲಿಸಲಿದೆ. ದುಬೆ ವಿರುದ್ಧ ಹೊರಿಸಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ಯಾವೆಲ್ಲಾ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ತಂಡವು ಕೇಳಿಕೊಂಡಿರುವುದಾಗಿ ಹೇಳಿಕೆ ತಿಳಿಸಿದೆ.

ವಿಕಾಸ್ ದುಬೆಯಂತಹ ಕುಖ್ಯಾತ ಕ್ರಿಮಿನಲ್ ಗೆ ದೊರೆತಿದ್ದ ಜಾಮೀನನ್ನು ರದ್ದುಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿತ್ತೇ?, ಗೂಂಡಾ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆ, ಗ್ಯಾಂಗ್ ಸ್ಟರ್ ಗಳ ಕಾಯ್ದೆಯಡಿ ಆತನ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ತನಿಖೆಯ ಯಾವುದೇ ಹಂತದಲ್ಲಿ ನ್ಯೂನತೆಗಳು ಉಂಟಾಗಿದ್ದವೇ ಇತ್ಯಾದಿ ವಿಷಯಗಳ ಕುರಿತಾಗಿಯೂ ಸಿಟ್ ತನಿಖೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News