ಬಿ.ಎಲ್. ಸಂತೋಷ್ ಪ್ರಕಾರ ರೇವಾದಲ್ಲಿರುವುದು ಸೋಲಾರ್ ಪ್ಲಾಂಟ್, ಆದರೆ ಸರಕಾರದ ವೆಬ್ ಸೈಟ್ ಹೇಳುವುದೇ ಬೇರೆ!

Update: 2020-07-12 10:27 GMT

ಜುಲೈ 10ರಂದು ಮಧ್ಯಪ್ರದೇಶದಲ್ಲಿ ರೇವಾ ಸೋಲಾರ್ ಪ್ಲಾಂಟನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ಸಂದರ್ಭ ಅವರು 750 ಮೆಗಾ ವ್ಯಾಟ್ ಸಾಮರ್ಥ್ಯದ ಈ ಪ್ಲಾಂಟ್ ಏಷ್ಯಾದಲ್ಲೇ ಅತಿ ದೊಡ್ಡದು ಎಂದು ಹೇಳಿದ್ದರು. ಪ್ರಧಾನಿಯ ಈ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕರ್ನಾಟಕದ ಪಾವಗಡದಲ್ಲಿ 2018ರಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಕಾರ್ಯಾಚರಿಸುತ್ತಿರುವಾಗ ರೇವಾದ ಸೋಲಾರ್ ಪಾರ್ಕ್ ಏಷ್ಯಾದಲ್ಲೇ ಅತ್ಯಂತ ದೊಡ್ಡದೆಂದು ಹೇಗೆ ಹೇಳಲು ಸಾಧ್ಯ ಎಂದವರು ಪ್ರಶ್ನಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ನಾಯಕ ಬಿ.ಎಲ್. ಸಂತೋಷ್ , “ರೇವಾ ಸೋಲಾರ್ ಪ್ಲಾಂಟ್ ಅನ್ನು ಏಶಿಯಾದಲ್ಲೇ ದೊಡ್ಡದು ಎಂದು ಕೇಂದ್ರ ಸರಕಾರ ಹೇಳಿದ್ದಕ್ಕೆ ಕಾಂಗ್ರೆಸ್ ನ ಕೆಲ ತಲೆಗಳು ಅಪಸ್ವರ ಎತ್ತುತ್ತಿವೆ. ಅವರು ಪಾವಗಡ ಅತಿ ದೊಡ್ಡದು ಎಂದು ಹೇಳುತ್ತಿದ್ದಾರೆ. ಸೋಲಾರ್ ಪ್ಲಾಂಟ್ ಮತ್ತು ಸೋಲಾರ್ ಪಾರ್ಕ್ ಬಗ್ಗೆ ಅವರಿಗೆ ಯಾರಾದರೂ ವ್ಯತ್ಯಾಸ ತಿಳಿಸಿಕೊಡಿ. ರೇವಾ ಪ್ಲಾಂಟ್ ಆಗಿದ್ದರೆ ಪಾವಗಡ ಪಾರ್ಕ್” ಎಂದಿದ್ದರು.

ಬಿ.ಎಲ್ . ಸಂತೋಷ್ ಪ್ರಕಾರ ರೇವಾದಲ್ಲಿರುವುದು ಸೋಲಾರ್ ಪ್ಲಾಂಟ್. ಪಾವಗಡದಲ್ಲಿರುವುದು ಸೋಲಾರ್ ಪಾರ್ಕ್. ಈ ಎರಡರ ನಡುವೆ ವ್ಯತ್ಯಾಸಗಳಿವೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ಆದರೆ ಭಾರತ ಸರಕಾರದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ವೆಬ್ ಸೈಟ್ ಹೇಳುವುದೇ ಬೇರೆ. ಈ ವೆಬ್ ಸೈಟ್ ನ ರಾಜ್ಯವಾರು ಸೋಲಾರ್ ಪಾರ್ಕ್ ಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ ನ ಹೆಸರಿದೆ. ಆದರೆ ಸೋಲಾರ್ ಪ್ಲಾಂಟ್ ಎನ್ನುವ ವಿಭಾಗ ಅದರಲ್ಲಿಲ್ಲ. ಹೀಗಾಗಿ ಸರಕಾರಿ ವೆಬ್ ಸೈಟ್ ನಲ್ಲಿಯೇ ರೇವಾದಲ್ಲಿರುವುದು ಸೋಲಾರ್ ಪಾರ್ಕ್ ಎಂದು ನಮೂದಿಸಿರುವಾಗ ಬಿ.ಎಲ್. ಸಂತೋಷ್ ಅವರ ಪ್ರತಿಪಾದನೆ ಸುಳ್ಳು ಎಂದು ಸಾಬೀತಾಗುತ್ತದೆ.

ಇನ್ನು ಮಧ್ಯಪ್ರದೇಶ ಸರಕಾರದ ವೆಬ್ ಸೈಟನ್ನೇ ಗಮನಿಸುವುದಾದರೆ ‘ರೇವಾ ಅಲ್ಟ್ರಾ ಮೆಗಾ ಸೋಲಾರ್ 1,590 ಎಕರೆ ವಿಸ್ತೀರ್ಣದ ಸೋಲಾರ್ ಪಾರ್ಕ್’ ಎಂದು ಬರೆಯಲಾಗಿದೆ.

ಕರ್ನಾಟಕದ ಪಾವಗಡ ಸೋಲಾರ್ ಪಾರ್ಕ್ ನ ಹೆಸರು ಭಾರತ ಸರಕಾರದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ವೆಬ್ ಸೈಟ್ ನ ಸೋಲಾರ್ ಪಾರ್ಕ್ ಗಳ ಪಟ್ಟಿಯಲ್ಲಿದೆ. ಪಾವಗಡ ಸೋಲಾರ್ ಪಾರ್ಕ್ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ ಇಸಿಐ) ಮತ್ತು ಕೆಆರ್ ಇಡಿಎಲ್ ನ ಜಂಟಿ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ 2020ರ ಜನವರಿ 19ರಂದು ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್, ‘ಜಗತ್ತಿನ ಅತಿ ದೊಡ್ಡ ಸೋಲಾರ್ ಪಾರ್ಕ್’ ಎಂದಿದ್ದರು.

ಪಾವಗಡ ಸೋಲಾರ್ ಪಾರ್ಕ್ 13,000 ಎಕರೆ ಪ್ರದೇಶವನ್ನು ಹೊಂದಿದೆ. ಇದೇ ಸಂದರ್ಭ ಮಧ್ಯಪ್ರದೇಶದ ರೇವಾ ಅಲ್ಟ್ರಾ ಮೆಗಾ ಸೋಲಾರ್ 1,590 ಎಕರೆ ವಿಸ್ತೀರ್ಣವನ್ನು ಹೊಂದಿದೆ.

ಏಶಿಯಾದಲ್ಲಿ ರೇವಾ ಸೋಲಾರ್ ಗಿಂತ ಬೃಹತ್ ಸೋಲಾರ್ ಪಾರ್ಕ್ ಗಳು

1.   ಭದ್ಲಾ ಸೋಲಾರ್ ಪಾರ್ಕ್ , ರಾಜಸ್ಥಾನ (14,000 ಎಕರೆ , 2,250 ಮೆಗಾ ವ್ಯಾಟ್ ಸಾಮರ್ಥ್ಯ)

2.   ಶಕ್ತಿ ಸ್ಥಳ ಸೋಲಾರ್ ಪವರ್ ಪ್ರಾಜೆಕ್ಟ್ : ಪಾವಗಡ (2050 ಮೆಗಾವ್ಯಾಟ್ ಸಾಮರ್ಥ್ಯ)

3.   ಅಲ್ಟ್ರಾ ಮೆಗಾ ಸೋಲಾರ್ ಪಾರ್ಕ್ , ಆಂಧ್ರ ಪ್ರದೇಶ (1000 ಮೆಗಾವ್ಯಾಟ್)

4.  ಲೋಂಗ್ಯಾಗ್ಸಿಯಾ ಡ್ಯಾಮ್ ಸೋಲಾರ್ ಪಾರ್ಕ್ , ಚೀನಾ (850 ಮೆಗಾ ವ್ಯಾಟ್)

5.   ಡಟೋಂಗ್ ಸೋಲಾರ್ ಪವರ್ (1000 ಮೆಗಾವ್ಯಾಟ್)

6.   ನೂರ್ ಸೋಲಾರ್ ಪಾರ್ಕ್ , ಅಬುಧಾಬಿ (1117 ಮೆಗಾವ್ಯಾಟ್)

7.   ಟೆಂಗರ್ ಡೆಸರ್ಟ್ ಸೋಲಾರ್ ಪಾರ್ಕ್ , ಚೀನಾ (1500 ಮೆಗಾವ್ಯಾಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News