ಎಲ್ಎಸಿಯಿಂದ ಸೇನಾ ವಾಪಸಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ: ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್

Update: 2020-07-12 15:23 GMT

 ಮುಂಬೈ,ಜೂ.13: ವಾಸ್ತವ ಗಡಿನಿಯಂತ್ರಣ ರೇಖೆ (ಎಸ್ಎಸಿ)ಯಿಂದ ಭಾರತೀಯ ಹಾಗೂ ಚೀನಿ ಪಡೆಗಳ ಹಿಂದೆ ಸರಿಯುವಿಕೆಯು ಈಗಷ್ಟೇ ಆರಂಭಗೊಂಡಿದ್ದು, ಅತ್ಯಂತ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶನಿವಾರ ತಿಳಿಸಿದ್ದಾರೆ.

ಭಾರತೀಯ ಜಾಗತಿಕ ಸಪ್ತಾಹ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದ ಅವರು ‘‘ಸೇನಾ ವಾಪಸಾತಿಯ ಅಗತ್ಯದ ಕುರಿತು ನಾವು ಒಡಂಬಡಿಕೆ ಮಾಡಿಕೊಂಡಿರುವುದು ಈಗ ಕಾರ್ಯಗತಗೊಳ್ಳುತ್ತಿದೆ. ಯಾಕೆಂದರೆ ಗಡಿಯಲ್ಲಿ ಇತ್ತಂಡಗಳು ಪರಸ್ಪರ ಅತ್ಯಂತ ನಿಕಟವಾಗಿ ನಿಯೋಜಿತವಾಗಿದ್ದವು’’ ಎಂದವರು ಹೇಳಿದರು. ‘‘ ಒಪ್ಪಂದದಂತೆ ಸೇನಾ ಹಿಂತೆಗೆತ ಹಾಗೂ ಉದ್ವಿಗ್ನತೆ ಶಮನ ಪ್ರಕ್ರಿಯೆ ಆರಂಭಗೊಂಡಿದ್ದು, ಅತ್ಯಂತ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಈ ಬಗ್ಗೆ ಇನ್ನೇನನ್ನೂ ಹೇಳಲು ನಾನು ಬಯಸುವುದಿಲ್ಲ” ಎಂದವರು ಹೇಳಿದರು.

ಭಾರತ-ಚೀನಾ ಗಡಿ ವ್ಯವಹಾರಗಳ ಮೇಲಿನ ಸಮಾಲೋಚನೆ ಹಾಗೂ ಸಮನ್ವಯತೆಗಾಗಿನ ಕಾರ್ಯತಂತ್ರದ ಚೌಕಟ್ಟಿನಡಿ ಭಾರತ ಹಾಗೂ ಚೀನಾ ಇನ್ನೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿದ ಮರುದಿನವೇ ಜೈಶಂಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಗಡಿಯಲ್ಲಿ ಶಾಂತಿ ಹಾಗೂ ನೆಮ್ಮದಿಯ ಸಂಪೂರ್ಣ ಮರುಸ್ಥಾಪನೆಗಾಗಿ ಪೂರ್ವ ಲಡಾಕ್ ನ ಎಲ್ಎಸಿಯಿಂದ ಎರಡೂ ಕಡೆಗಳ ಸೇನಾಪಡೆಗಳನ್ನು ಸಕಾಲಿಕವಾಗಿ ಸಂಪೂರ್ಣವಾಗಿ ಹಿಂದೆ ಸರಿಯಲು ಇತ್ತಂಡಗಳು ದೃಢ ನಿರ್ಧಾರ ಮಾಡಿವೆ ಎಂದವರು ಹೇಳಿದ್ದಾರೆ.

ಜುಲೈ 5ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಸುಮಾರು ಎರಡು ತಾಸುಗಳ ಕಾಲ ದೂರವಾಣಿ ಸಂಭಾಷಣೆ ನಡೆದ ಬಳಿಕ ಭಾರತ ಹಾಗೂ ಚೀನಾ ಸೇನೆಗಳ ವಾಪಸಾತಿ ಪ್ರಕ್ರಿಯೆ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News