ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ವೆಸ್ಟ್‌ಇಂಡೀಸ್‌ಗೆ ರೋಚಕ ಜಯ

Update: 2020-07-12 17:02 GMT

 ಹೊಸದಿಲ್ಲಿ, ಜು.12: ವೇಗದ ಬೌಲರ್ ಶನೊನ್ ಟೆರ್ರಿ ಗೇಬ್ರಿಯಲ್(5-75) ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬ್ಲಾಕ್‌ವುಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ರವಿವಾರ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿತು.

 ಇಂಗ್ಲೆಂಡ್‌ನ್ನು 2ನೇ ಇನಿಂಗ್ಸ್‌ನಲ್ಲಿ 313 ರನ್‌ಗೆ ನಿಯಂತ್ರಿಸಿದ ವಿಂಡೀಸ್ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು 200 ರನ್ ಗುರಿ ಪಡೆಯಿತು. ಒಂದು ಹಂತದಲ್ಲಿ 27 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ಬ್ಲಾಕ್‌ವುಡ್(95,154 ಎಸೆತ, 12 ಬೌಂ.) ಆಸರೆಯಾದರು. ಚೇಸ್(35)ಅವರೊಂದಿಗೆ 5ನೇ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿದ ಬ್ಲಾಕ್‌ವುಡ್ ಬಳಿಕ ಡೌರಿಚ್(20)ಅವರೊಂದಿಗೆ 6ನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಾಯಕ ಹೋಲ್ಡರ್(ಔಟಾಗದೆ 14)ವಿಂಡೀಸ್ 64.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲು ನೆರವಾದರು.

ಇದಕ್ಕೂ ಮೊದಲು ಇಂಗ್ಲೆಂಡ್ ತಂಡ 5ನೇ ಹಾಗೂ ಅಂತಿಮ ದಿನವಾದ ರವಿವಾರ ತನ್ನ 2ನೇ ಇನಿಂಗ್ಸ್‌ನ್ನು 8 ವಿಕೆಟ್‌ಗಳ ನಷ್ಟಕ್ಕೆ 284 ರನ್‌ನಿಂದ ಆರಂಭಿಸಿತು. ಒಟ್ಟು 170 ರನ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಆತಿಥೇಯರು ಆಟ ಆರಂಭವಾಗಿ ಅರ್ಧಗಂಟೆ ಕಳೆಯುವಷ್ಟರಲ್ಲಿ ನಿನ್ನೆಯ ಮೊತ್ತಕ್ಕೆ 29 ರನ್ ಸೇರಿಸಿ ಕೊನೆಯ 2 ವಿಕೆಟ್‌ಗಳನ್ನು ಕಳೆದುಕೊಂಡರು.ವಿಂಡೀಸ್ ಪರವಾಗಿ ಗೇಬ್ರಿಯಲ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಜೋಸೆಫ್(2-45) ಹಾಗೂ ಚೇಸ್(2-71) ತಲಾ 2 ವಿಕೆಟ್ ಪಡೆದರು. ಗೇಬ್ರಿಯಲ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು.

ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಕ್ರಾವ್ಲೆ(76 ರನ್)ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಸಿಬ್ಲೆ(50), ಸ್ಟೋಕ್ಸ್(46) ಹಾಗೂ ಬರ್ನ್ಸ್(42)ಎರಡಂಕೆಯ ಸ್ಕೋರ್ ಗಳಿಸಿ ತಂಡವನ್ನು ಆಧರಿಸಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್: 204

ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 308

ಇಂಗ್ಲೆಂಡ್ ಎರಡನೇ ಇನಿಂಗ್ಸ್: 313

(ಕ್ರಾವ್ಲೆ 76, ಸಿಬ್ಲೆ 50,ಸ್ಟೋಕ್ಸ್ 46, ಬರ್ನ್ಸ್ 42, ಗೇಬ್ರಿಯಲ್ 5-75, ಜೋಸೆಫ್ 2-45, ಚೇಸ್ 2-71)

ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್: 64.2 ಓವರ್‌ಗಳಲ್ಲಿ 200/6

(ಬ್ಲಾಕ್‌ವುಡ್ 95, ಆರ್ಚರ್ 3-45)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News