ಪಿಟಿಐಗೆ 84.4 ಕೋಟಿ ರೂ. ದಂಡ ವಿಧಿಸಿದ ಕೇಂದ್ರ ಸರಕಾರ

Update: 2020-07-13 12:14 GMT

ಹೊಸದಿಲ್ಲಿ : ರಾಜಧಾನಿಯ ಸಂಸದ್ ಮಾರ್ಗ್ ನಲ್ಲಿರುವ ತನ್ನ ಕಚೇರಿಯಿರುವ ಸ್ಥಳದ ಬಾಡಿಗೆಯನ್ನು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) 1984ರಿಂದ ಪಾವತಿಸಿಲ್ಲ ಎಂದು ಆರೋಪಿಸಿ ಕೇಂದ್ರ ಸರಕಾರ ಸಂಸ್ಥೆಗೆ  84.48 ಕೋಟಿ ರೂ. ದಂಡ ವಿಧಿಸಿದೆ.

ಗೃಹ ಸಚಿವಾಲಯದ ಜಮೀನು ಮತ್ತು ಅಭಿವೃದ್ಧಿ ಕಚೇರಿ ಜುಲೈ 7ರಂದು ಈ ನೋಟಿಸ್ ಜಾರಿಗೊಳಿಸಿದ್ದು, ಆಗಸ್ಟ್ 7ರೊಳಗೆ ದಂಡ ಪಾವತಿಸುವಂತೆ ಅದರಲ್ಲಿ ಪಿಟಿಐಗೆ ಸೂಚಿಸಲಾಗಿದೆಯಲ್ಲದೆ ತಪ್ಪಿದಲ್ಲಿ ಬಾಕಿ ಮೊತ್ತದ ಮೇಲೆ ಶೇ. 10ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ಹೇಳಲಾಗಿದೆ. ಈ ಕುರಿತಂತೆ ಯಾವುದಾದರೂ ಸ್ಪಷ್ಟೀಕರಣ ಕೇಳಲು ಪಿಟಿಐಗೆ ಒಂದು ವಾರ ಸಮಯ ನೀಡಲಾಗಿದೆ. ಲೀಸ್ ಗೆ ನೀಡಲಾದ ಜಮೀನಿನಲ್ಲಿ ಪಿಟಿಐ ಕಚೇರಿ ನಿರ್ಮಿಸಲಾಗಿದ್ದು ಜಮೀನಿಗೆ  1984ರಿಂದ ಬಾಡಿಗೆ ಪಾವತಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕಳೆದ ತಿಂಗಳು ಪಿಟಿಐ ಚೀನಿ ರಾಯಭಾರಿ ಸುನ್ ವೀಡೊಂಗ್ ಅವರ ಸಂದರ್ಶನ ಪ್ರಕಟಿಸಿದ್ದು, ಅದರಲ್ಲಿ ಲಡಾಖ್ ಸಮಸ್ಯೆ ಹಾಗೂ ಗಲ್ವಾನ್ ಸಂಘರ್ಷಕ್ಕೆ ಅವರು ಭಾರತವನ್ನು ದೂಷಿಸಿದ್ದರು. ಇದರ ನಂತರ ತಾನು ಪಿಟಿಐಗೆ ನೀಡಿದ್ದ ವಾರ್ಷಿಕ ರೂ 7 ಕೋಟಿ ಗುತ್ತಿಗೆಯನ್ನು ಮರುಪರಿಶೀಲಿಸುತ್ತಿರುವುದಾಗಿ ಪ್ರಸಾರ ಭಾರತಿ ಹೇಳಿತ್ತಲ್ಲದೆ, ಭಾರತದ ರಾಷ್ಟ್ರೀಯ ಹಿತಾಸಕಿತಗೆ ವಿರುದ್ಧವಾದ ಇತ್ತೀಚಿಗಿನ ಕೆಲ ವರದಿಗಳನ್ನು ಪರಿಗಣಿಸಿ  ಈ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ ಎಂದು ಹೇಳಿತ್ತು.

ಇದೀಗ ಪಿಟಿಐಗೆ ದಂಡ ವಿಧಿಸಿರುವ ಕ್ರಮವೂ ಇದರದ್ದೇ ಮುಂದುವರಿದ ಭಾಗವೆಂದೇ ತಿಳಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News