ಸ್ಯಾನ್ ಡೀಗೊ ನೌಕಾನೆಲೆಯಲ್ಲಿ ಹಡಗಿನಲ್ಲಿ ಸ್ಫೋಟ: 21 ಮಂದಿಗೆ ಗಾಯ

Update: 2020-07-13 15:38 GMT

ಸ್ಯಾನ್ ಡೀಗೊ (ಅಮೆರಿಕ), ಜು. 13: ಅಮೆರಿಕದ ಸ್ಯಾನ್ ಡೀಗೊದ ನೌಕಾ ನೆಲೆಯಲ್ಲಿರುವ ನೌಕೆಯೊಂದರಲ್ಲಿ ರವಿವಾರ ಸಂಭವಿಸಿದ ಸ್ಫೋಟ ಮತ್ತು ಬೆಂಕಿಯಲ್ಲಿ 21 ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಯುಎಸ್ಎಸ್ ಬಾನ್ಹೋಮೀಯಲ್ಲಿ ರವಿವಾರ ಬೆಳಗ್ಗೆ 9 ಗಂಟೆಗೆ ಸ್ವಲ್ಪ ಮುಂಚೆ ಬೆಂಕಿ ಹೊತ್ತಿಕೊಂಡಿದೆ ಎಂದು ಯುಎಸ್ ಪೆಸಿಫಿಕ್ ಫ್ಲೀಟ್ ನ ನ್ಯಾವಲ್ ಸರ್ಫೇಸ್ ಪಡೆಯ ವಕ್ತಾರ ಮೈಕ್ ರ್ಯಾನಿ ತಿಳಿಸಿದರು.

‘‘17 ನಾವಿಕರು ಮತ್ತು ನಾಲ್ವರು ನಾಗರಿಕರನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಕಿರು ಹೇಳಿಕೆಯೊಂದರಲ್ಲಿ ಅವರು ತಿಳಿಸಿದರು. ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ.

ಸ್ಫೋಟ ಮತ್ತು ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. 255 ಮೀಟರ್ ಉದ್ದದ ನೌಕೆಯ ಯಾವ ಭಾಗದಲ್ಲಿ ಸ್ಫೋಟ ಮತ್ತು ಬೆಂಕಿ ಸಂಭವಿಸಿದೆ ಎನ್ನುವುದೂ ತಿಳಿದಿಲ್ಲ. ಸ್ಫೋಟ ನಡೆದ ಸಂದರ್ಭದಲ್ಲಿ ಸುಮಾರು 160 ನಾವಿಕರು ಮತ್ತು ಅಧಿಕಾರಿಗಳು ನೌಕೆಯಲ್ಲಿದ್ದರು. ಸಾಮಾನ್ಯವಾಗಿ ನೌಕೆಯು ಸಕ್ರಿಯ ಕರ್ತವ್ಯದಲ್ಲಿರುವಾಗ ಅದರಲ್ಲಿ ಸಾವಿರಾರು ಮಂದಿ ನಾವಿಕರು ಮತ್ತು ಅಧಿಕಾರಿಗಳು ಇರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News